ಕರ್ನಾಟಕ

karnataka

ETV Bharat / bharat

11 ಬುಡಕಟ್ಟು ಮಹಿಳೆಯರ ಮೇಲಿನ ಅತ್ಯಾಚಾರ ಕೇಸ್​: 21 ಪೊಲೀಸರು ಖುಲಾಸೆ - ವಿಶಾಖಪಟ್ಟಣಂನಲ್ಲಿ ಮಹಿಳೆಯರ ಮೇಲೆ ರೇಪ್​ ಕೇಸ್​

2007 ರಲ್ಲಿ ನಡೆದ ಬುಡಕಟ್ಟು ಮಹಿಳೆಯರ ಮೇಲಿನ ಅತ್ಯಾಚಾರ ಆರೋಪದ ಪ್ರಕರಣದ ತೀರ್ಪನ್ನು ಕೋರ್ಟ್​ ಇದೀಗ ನೀಡಿದ್ದು, 21 ಆರೋಪಿಗಳನ್ನು ಕೇಸ್​ನಿಂದ ಖುಲಾಸೆ ಮಾಡಿದೆ.

11 ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರ ಕೇಸ್​
11 ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರ ಕೇಸ್​

By

Published : Apr 9, 2023, 6:53 AM IST

ವಿಶಾಖಪಟ್ಟಣಂ ( ಆಂಧ್ರ ಪ್ರದೇಶ):ಇಲ್ಲಿನ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಹಳ್ಳಿಯೊಂದರಲ್ಲಿ 16 ವರ್ಷಗಳ ಹಿಂದೆ ಬುಡಕಟ್ಟು ಜನಾಂಗದ 11 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ 21 ಪೊಲೀಸರನ್ನು ಆಂಧ್ರಪ್ರದೇಶದ ವಿಶೇಷ ನ್ಯಾಯಾಲಯ ಖುಲಾಸೆ ಮಾಡಿದೆ. ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ವಿಫಲರಾದ ಇಬ್ಬರು ತನಿಖಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

2007 ರಲ್ಲಿ ಗ್ರೇಹೌಂಡ್ಸ್ ವಿಶೇಷ ತಂಡಕ್ಕೆ ಸೇರಿದ ಪೊಲೀಸ್ ಸಿಬ್ಬಂದಿ ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಕುರಿತಂತೆ 2018 ರಲ್ಲಿ ಪ್ರಕರಣ ದಾಖಲಾಗಿ, ಕೋರ್ಟ್ ವಿಚಾರಣೆ ನಡೆಸಿತ್ತು. ವಿಶಾಖಪಟ್ಟಣಂ ಕೋರ್ಟ್​ನಲ್ಲಿ ಈ ಬಗ್ಗೆ ವಾದ ಪ್ರತಿವಾದ ನಡೆಯಿತು. ಎಸ್​ಸಿ- ಎಸ್​​ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಗುರುವಾರ ವಿಚಾರಣೆ ಅಂತ್ಯಗೊಳಿಸಿದರು. ಪ್ರಕರಣದಲ್ಲಿ ಪೊಲೀಸರು ಅತ್ಯಾಚಾರ ನಡೆಸಿದ್ದು, ಸಾಬೀತಾಗದ ಕಾರಣ ಅವರನ್ನು ಖುಲಾಸೆಗೊಳಿಸಿದೆ.

ಅತ್ಯಾಚಾರದಲ್ಲಿ ಬದುಕುಳಿದವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ) ಮೂಲಕ ಪರಿಹಾರವನ್ನು ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಮಾನವ ಹಕ್ಕುಗಳ ವೇದಿಕೆ ಸದಸ್ಯರ ಪ್ರಕಾರ, ಆರೋಪಿತ ಪೊಲೀಸರಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಅವರಲ್ಲಿ ಕೆಲವರು ಸೇವಾ ನಿವೃತ್ತಿ ಹೊಂದಿದ್ದಾರೆ. ಇನ್ನು ಕೆಲವರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಮಾನವ ಹಕ್ಕುಗಳ ವೇದಿಕೆಯ ರಾಜ್ಯ ಸಮಿತಿಯ ಉಪಾಧ್ಯಕ್ಷ ಎಂ ಶರತ್ ಪ್ರಕರಣ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, "21 ಸದಸ್ಯರ ವಿಶೇಷ ಪೊಲೀಸ್ ತಂಡವು 2007ರ ಆಗಸ್ಟ್ 20 ರಂದು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ವಾಕಪಲ್ಲಿ ಗ್ರಾಮದಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ತೆರಳಿತ್ತು. ಈ ವೇಳೆ ದುರ್ಬಲ ಬುಡಕಟ್ಟು ಗುಂಪಿಗೆ ಸೇರಿದ 11 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿತ್ತು. ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಯಿತು. ಆದರೆ, ಈವರೆಗೂ ಒಬ್ಬೇ ಒಬ್ಬ ಆರೋಪಿಯನ್ನು ಸಹ ಬಂಧಿಸಲಾಗಿಲ್ಲ" ಎಂದು ಆರೋಪಿಸಿದರು.

"ಬುಡಕಟ್ಟು ಮಹಿಳೆಯರ ಮೇಲೆ ನಡೆದ ಅತ್ಯಾಚಾರದಲ್ಲಿ ಬದುಕುಳಿದವರಿಗೆ ಪರಿಹಾರವನ್ನು ಪಾವತಿಸಲು ನ್ಯಾಯಾಲಯವು ಆದೇಶಿಸಿರುವುದು ನ್ಯಾಯದ ಮೇಲಿರುವ ನಂಬಿಕೆಯನ್ನು ಉಳಿಸಿದೆ ಮಾನವ ಹಕ್ಕುಗಳ ವೇದಿಕೆ ಹೇಳಿದೆ. ಆರೋಪಿ ಪೊಲೀಸರ ವಿರುದ್ಧದ ತನಿಖೆಯು ಪ್ರಾರಂಭದಲ್ಲಿಯೇ ರಾಜಿ ಮಾಡಿಕೊಳ್ಳಲಾಗಿದೆ. ಅವರನ್ನು ರಕ್ಷಿಸುವ ಉದ್ದೇಶದಿಂದ ತನಿಖೆ ನಡೆದಿದೆ. ಕ್ರಿಮಿನಲ್ ಕೋಡ್‌ ನಿಯಮಗಳ ಅನುಸಾರ ವಿಚಾರಣೆ ನಡೆಯದೇ ಎಲ್ಲ ತನಿಖಾ ಹಂತಗಳನ್ನು ನಿರ್ಲಕ್ಷಿಸಿ, ವಿಧಿವಿಜ್ಞಾನ ವೈದ್ಯಕೀಯ ಪರೀಕ್ಷೆಗಳನ್ನೂ ಪ್ರಕರಣದಲ್ಲಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದೆ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ;ಇನ್ನು ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖೆ ನಡೆಸಿದ ತನಿಖಾಧಿಕಾರಿಗಳ ವಿರುದ್ಧ ಕೋರ್ಟ್​ ಅಸಂತೃಪ್ತಿ ವ್ಯಕ್ತಪಡಿಸಿದೆ. ಅಧಿಕಾರಿಗಳು ವಿಚಾರಣೆಯನ್ನು ಸೂಕ್ತ ರೀತಿಯಲ್ಲಿ ನಡೆಸಿಲ್ಲ. ನ್ಯಾಯಸಮ್ಮತ ತನಿಖೆ ಇಲ್ಲಿ ನಡೆಸಲಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಓದಿ:ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತೆರಳುತ್ತಿದ್ದ ಕಾರು​ ಅಪಘಾತ

ABOUT THE AUTHOR

...view details