ಕಣ್ಣೂರು, ಕೇರಳ:ಇದು ಡಿಜಿಟಲ್ ವ್ಯವಹಾರಗಳ ಯುಗ. ಕಡ್ಡಿಪೆಟ್ಟಿಗೆಯಿಂದ ಹಿಡಿದು ಕರ್ಪೂರದವರೆಗೆ ಎಲ್ಲವನ್ನೂ ನಾವು ಆನ್‌ಲೈನ್‌ನಲ್ಲೇ ಆರ್ಡರ್ ಮಾಡುತ್ತೇವೆ. ಕಾಲ ಹೇಗೆ ಬದಲಾಗುತ್ತದೆಯೋ ಅದರ ಅನುಗುಣವಾಗಿ ವಂಚಕರು ಬದಲಾಗುತ್ತಾರೆ. ಈಗ ಆನ್‌ಲೈನ್ ಕ್ಷೇತ್ರದಲ್ಲಿ ವಂಚನೆ ಮಿತಿ ಮೀರಿದೆ. ಹಣ ಪಾವತಿಸಿ ಆರ್ಡರ್ ಮಾಡಿದ ಸರಕುಗಳು ಕೈಗೆಟುಕುತ್ತಿಲ್ಲ. ಬದಲಾಗಿ ಇದರಿಂದ ಮೋಸ, ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಕೆಳಕಂ ಮೂಲದ ಜೋಸ್ಮಿ ಎಂಬುವವರಿಗೆ ಇಂತಹದೊಂದು ಕೆಟ್ಟ ಅನುಭವವಾಗಿದೆ.
ಜುಲೈ 13 ರಂದು ಜೋಸ್ಮಿ ಎಂಬುವರು ಆನ್‌ಲೈನ್ ಮೂಲಕ ಬೆಲೆಬಾಳುವ ಮೊಬೈಲ್ ಫೋನ್ವೊಂದನ್ನು ಬುಕ್ ಮಾಡಿದ್ದರು. ಆರ್ಡರ್ ಮಾಡಿದಂತೆ ಜುಲೈ 20ರಂದು ಪಾರ್ಸೆಲ್ ಮನೆಗೆ ಬಂದಿತ್ತು. ಮುರಿಂಗೋಡಿನಲ್ಲಿರುವ ಏಜೆನ್ಸಿಯವರು ಜೋಸ್ಮಿ ಅವರಿಗೆ ಬಾಕ್ಸ್ ನೀಡಿದ್ದರು. ಕ್ಯಾಶ್ ಆನ್ ಡೆಲಿವರಿ ಆಗಿದ್ದರಿಂದ ಕೊರಿಯರ್ ಬಾಯ್ಗೆ ಜೋಸ್ಮಿ ಅವರು 7,299 ರೂಪಾಯಿ ನೀಡಿದ್ದರು. ತನ್ನ ಕಾರ್ಯ ಮುಗಿದ ಬಳಿಕ ಕೊರಿಯರ್ ಬಾಯ್ ಅಲ್ಲಿಂದ ನಿರ್ಗಮಿಸಿದ್ದಾನೆ. ಆದರೆ, ಬಾಕ್ಸ್ ಓಪನ್ ಮಾಡಿ ನೋಡಿದಾಗ ಜೋಸ್ಮಿ ಮೋಸ ಹೋಗಿರುವುದು ಗೊತ್ತಾಗಿದೆ.
ಫೋನ್ ಬದಲಿಗೆ ಬಾಕ್ಸ್ನಲ್ಲಿ ಫೋನ್ ಆಕಾರದ ಕಟ್ಟಿಗೆಯ ತುಂಡೊಂದಿತ್ತು. ಕಟ್ಟಿಗೆ ತುಂಡು ಎಂದು ಗೊತ್ತಾದ ಕೂಡಲೇ ಕೊರಿಯರ್ ಜೊತೆ ಬಂದವನಿಗೆ ಕರೆ ಮಾಡಿದೆ. ಆದರೆ ಆತ ಮೂರು ದಿನದೊಳಗೆ ಹಿಂಪಡೆಯಬಹುದು ಎಂಬ ಭರವಸೆ ನೀಡಿದ್ದಾನೆ. ಬಳಿಕ ಕಸ್ಟಮರ್ ಕೇರ್ಗೆ ದೂರು ನೀಡಿದೆ. ಅವರು ಹಣ ಹಿಂತಿರುಗಿಸುವುದಾಗಿ ಮೊದಲ ಹೇಳಿದ್ದರು. ಆದರೆ ಫೋನ್ ಅನ್ನು ಹಿಂಪಡೆಯಲಾಗುವುದಿಲ್ಲ ಎಂದು ಕಂಪನಿ ಸೋಮವಾರ ಹೇಳಿದೆ. ಹೀಗಾಗಿ ಜೋಸ್ಮಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೊರಿಯರ್ ಬಾಕ್ಸ್ ಹಲವಾರು ಏಜೆನ್ಸಿಗಳ ಮೂಲಕ ಮಹಿಳೆಯ ಮನೆಗೆ ತಲುಪಿದೆ. ಈ ನಡುವೆ ಯಾರೋ ಬಾಕ್ಸ್ ತೆರೆದು ಮೊಬೈಲ್ ಫೋನ್ ಬದಲಿಸಿ ಮರದ ತುಂಡನ್ನು ಹಾಕಿದ್ದಾರೆ ಎಂದು ತನಿಖೆ ಮೂಲಕ ತಿಳಿದು ಬಂದಿದೆ. ಮೊಬೈಲ್ ಫೋನ್ ವಂಚನೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.
ಓದಿ:ಹಾಸನ: ಐಫೋನ್ಗಾಗಿ ಕೊರಿಯರ್ ಬಾಯ್ ಕೊಲೆ, 3 ದಿನ ಮನೆಯ ಬಾತ್ರೂಮ್ನಲ್ಲಿ ಶವ ಇಟ್ಟಿದ್ದ ಆರೋಪಿ
ಈ ರೀತಿಯ ಆನ್‌ಲೈನ್ ವಂಚನೆಗಳು ಇದೆ ಮೊದಲೇನಲ್ಲ ಬಿಡಿ. ದೇಶದ ವಿವಿಧ ಭಾಗಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ಇಂತಹದ್ದೇ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಯುವಕ ಆನ್‌ಲೈನ್ ಶಾಪಿಂಗ್ ಸೈಟ್‌ನಿಂದ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು. ಆದ್ರೆ ಆತನಿಗೆ ಎ ಫೋರ್ ಶೀಟ್‌ಗಳ ಬಂಡಲ್ ಬಾಕ್ಸ್ನಲ್ಲಿ ಬಂದಿತ್ತು. ಯುವಕ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾನೆ. ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.