ಭೋಪಾಲ್ (ಮಧ್ಯಪ್ರದೇಶ): ಇಬ್ಬರು ಮಕ್ಕಳು ಸೇರಿದಂತೆ ತಂದೆ-ತಾಯಿ ದುರಂತ ಅಂತ್ಯ ಕಂಡಿರುವ ಘಟನೆ ಗುರುವಾರ ಭೋಪಾಲ್‌ನ ರಾತಿಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭೂಪೇಂದ್ರ ವಿಶ್ವಕರ್ಮ ಮತ್ತು ಅವರ ಪತ್ನಿ ರಿತು ವಿಶ್ವಕರ್ಮ ಹಾಗೂ ಅವರ ಇಬ್ಬರು ಪುತ್ರರು ನಿಗೂಢವಾಗಿ ಮೃತಪಟ್ಟವರು. ಪೋಷಕರು ತಮ್ಮ 9 ವರ್ಷ ಮತ್ತು 3 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳನ್ನು ಕೊಂದು ಬಳಿಕ ತಾವು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪತಿ ಭೂಪೇಂದ್ರ ಮತ್ತು ಪತ್ನಿ ರಿತು ಮೃತದೇಹಗಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದರೆ, ಮಕ್ಕಳ ಮೃತದೇಹ ಅದೇ ಕೊಠಡಿಯ ಬೆಡ್ ರೂಮಿನಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹದ್ದೊಂದು ಘಟನೆ ನಡೆದಿದೆ ಎಂಬ ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಾತಿಬಾದ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ನಾಲ್ಕು ಪುಟಗಳ ಡೆತ್ ನೋಟು ಪತ್ತೆಯಾಗಿದೆ. ಮಕ್ಕಳು ವಿಷ ಸೇವನೆಯಿಂದ ಮೃತಪಟ್ಟಿದ್ದು ಭೂಪೇಂದ್ರ ಹಾಗೂ ಆತನ ಪತ್ನಿ ರಿತು ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾಲದಿಂದ ಬೇಸತ್ತು ಈ ಕುಟುಂಬ ಇಂತಹ ದುಡುಕ ನಿರ್ಧಾರಕ್ಕೆ ಬಂದಿರಬಹುದೆಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಮಕ್ಕಳಿಬ್ಬರ ಸಾವು ಖಚಿತವಾದ ಬಳಿಕವೇ ಪತಿ-ಪತ್ನಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಬೆಳಗಿನ ಜಾವ 4:00 ಗಂಟೆ ಸುಮಾರಿಗೆ ಭೂಪೇಂದ್ರ ಅವರು ತಮ್ಮ ಕುಟುಂಬದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಸೆಲ್ಫಿ ಜೊತೆಗೆ ತಾವು ಬರೆದ ನಾಲ್ಕು ಪುಟಗಳ ಸೂಸೈಡ್ ನೋಟ್ ಅನ್ನು ತಮ್ಮ ಸೊಸೆಗೆ ವಾಟ್ಸಾಪ್ ಮಾಡಿದ್ದಾರೆ. ಫೋಟೋ ಕೆಳಗೆ ನೀವು ಮತ್ತು ನಾವು ಭವಿಷ್ಯದಲ್ಲಿ ಮತ್ತೆ ಭೇಟಿಯಾಗುವುದಿಲ್ಲ. ನಮ್ಮ ಪುಟ್ಟ ಸುಂದರ ಕುಟುಂಬ ಯಾರ ಕಣ್ಣಿಗೆ ಬಿದ್ದಿದೆಯೋ ಗೊತ್ತಿಲ್ಲ, ಏನು ಮಾಡಬೇಕು, ಏನು ಮಾಡಬಾರದು ಎಂಬುದು ಅರ್ಥವಾಗುತ್ತಿಲ್ಲ. ನನ್ನ ನಿರ್ಧಾರದಿಂದ ನಮ್ಮ ಕುಟುಂಬದವರೆಲ್ಲರೂ ನೊಂದುಕೊಳ್ಳುವಂತಾಗಿದೆ. ದಯವಿಟ್ಟು ನನ್ನ ಕುಟುಂಬವನ್ನು ಕ್ಷಮಿಸಿ, ನಾನು ಅಸಹಾಯಕನಾಗಿದ್ದೇನೆ, ಬಹುಶಃ ನಾವು ಹೋದ ನಂತರ ಎಲ್ಲವೂ ಸರಿಯಾಗಬಹುದು. ನಾವು ಹೋದ ಬಳಿಕ ನನ್ನ ಕುಟುಂಬಕ್ಕೆ ಸಾಲಕ್ಕಾಗಿ ತೊಂದರೆ ಕೊಡಬೇಡಿ. ಯಾವುದೇ ಸಂಬಂಧಿಕರು ಅಥವಾ ಸಹೋದ್ಯೋಗಿಗಳಿಗೆ ಕಿರುಕುಳ ನೀಡಬಾರದು ಎಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ ಎಂದು ಭೂಪೇಂದ್ರ ವಿಶ್ವಕರ್ಮ ತಮ್ಮ ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ಸದ್ಯಕ್ಕೆ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ನಡೆಸಲಾಗುತ್ತದೆ. ಆನ್‌ಲೈನ್ ಅಪ್ಲಿಕೇಶನ್ ಮೂಲಕ ಸಾಲ ಪಡೆದಿದ್ದು ಅದನ್ನು ಮರಳಿ ಕೊಡಲು ಆಗದ ಹಿನ್ನೆಲೆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಅಲ್ಲದೇ ಕೆಲವು ಲೇವಾದೇವಿಗಾರರು ಹಣ ನೀಡದಿದ್ದರೆ ನಿಮ್ಮ ಕುಟುಂಬದ ಕೆಲವು ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಅವರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ. ಸದ್ಯಕ್ಕೆ ದೂರು ದಾಖಲಾಗಿದ್ದು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದೆಂದು ಭೋಪಾಲ್‌ನ ಸಹಾಯಕ ಪೊಲೀಸ್ ಆಯುಕ್ತ ಚಂದ್ರಶೇಖರ್ ಪಾಂಡೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಐಷಾರಾಮಿ ಬದುಕಿಗೆ ಲಾರಿ ಕಳ್ಳತನ; ಆರೋಪಿ ಬಂಧಿಸಲು 278 ಸಿಸಿಟಿವಿ ಕ್ಯಾಮರಾ ಜಾಲಾಡಿದ ಪೊಲೀಸರು!