ಕನ್ಯಾಕುಮಾರಿ (ತಮಿಳುನಾಡು): ಏಳು ವರ್ಷದ ಮಗನನ್ನು ಕೊಂದು ನಂತರ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನ್ಯಾಕುಮಾರಿ ಜಿಲ್ಲೆಯ ತುಕಲೆ ಪ್ರದೇಶದಲ್ಲಿ ಜುಲೈ 22ರಂದು ನಡೆದಿದೆ. ಜಿಲ್ಲೆಯ ಮುಕಿಲಂಕುಡಿಯಿರಪ್ಪು ಪ್ರದೇಶದ 40 ವರ್ಷದ ಮುರಳೀಧರನ್, 36 ವರ್ಷದ ಶೈಲಜಾ ಹಾಗೂ 7 ವರ್ಷದ ಮಗ ಮೃತಪಟ್ಟವರು.
ಮುರಳೀಧರನ್ ಹಾಗೂ ಜೈವಿಕ ತಂತ್ರಜ್ಞಾನ ಪದವೀಧರೆಯಾಗಿದ್ದ ಶೈಲಜಾ 2010ರಲ್ಲಿ ವಿವಾಹವಾಗಿದ್ದರು. ದಂಪತಿಗೆ 7 ವರ್ಷದ ಮಗನಿದ್ದನು. ಎಂಇ, ಬಿಎಲ್ ಪದವೀಧರರಾಗಿದ್ದ ಮುರಳೀಧರ್ ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ದಂಪತಿ ಮೂರು ವರ್ಷಗಳ ಹಿಂದೆ ತುಕಲೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ನಂತರದಲ್ಲಿ ಐಟಿ ಕಂಪನಿ ಕೆಲಸ ತೊರೆದ ಮುರಳೀಧರನ್ ನಾಗರಕೋಯಿಲ್ ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು.
ಶೈಲಜಾ ಅವರ ತಂದೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮಗಳ ಮನೆಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಸಂಜೆ ಹಾಲು ತೆಗೆದುಕೊಂಡು ಹೋದಾಗ ಮನೆ ಬಾಗಿಲು ಹಾಕಿದ್ದರಿಂದ, ಮಗಳನ್ನು ತಂದೆ ಜೋರಾಗಿ ಕರೆದಿದ್ದಾರೆ. ಆದರೂ ಮಗಳು ಮನೆ ಬಾಗಿಲು ತೆರೆಯದ ಕಾರಣ, ಅನುಮಾನಗೊಂಡು ತಂದೆ ನೆರೆಹೊರೆಯವರ ಸಹಾಯದೊಂದಿಗೆ ಮನೆಯ ಬಾಗಿಲು ಮುರಿದಿದ್ದಾರೆ. ಬಾಗಿಲು ಒಡೆಯುತ್ತಿದ್ದಂತೆ ಅಳಿಯ ಮುರಳೀಧರನ್ ಮನೆಯ ಹಾಲ್ನಲ್ಲಿ, ಮಗಳು ಶೈಲಜಾ ಕೋಣೆಯೊಂದರಲ್ಲಿ, ಮೊಮ್ಮಗ ಬೆಡ್ ಮೇಲೆ ಶವವಾಗಿ ಬಿದ್ದಿದ್ದರು. ನಂತರ ಅವರು ತುಕಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.