ಕರ್ನಾಟಕ

karnataka

ETV Bharat / bharat

ಸಿಲಿಕಾನ್​ ಸಿಟಿಯಲ್ಲಿ ಶೀಘ್ರವೇ ದೇಶದ ಮೊದಲ 'ಎಸಿ ರೈಲು ನಿಲ್ದಾಣ' ನಾಡಿಗೆ ಸಮರ್ಪಣೆ: ಕೇಂದ್ರ ಸಚಿವ - ರೈಲ್ವೆ ಸಚಿವ ಪಿಯೂಷ್‌ ಗೋಯಲ್‌

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ 'ಭಾರತದ ಮೊಟ್ಟ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ (ಎಸಿ) ರೈಲ್ವೆ ನಿಲ್ದಾಣ'ಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್ ಟ್ವೀಟ್ ಮಾಡಿದ್ದಾರೆ.

Country's first Rs-314 crore centralised AC railway terminal in Bengaluru
ಸಿಲಿಕಾನ್​ ಸಿಟಿಯಲ್ಲಿ ಶೀಘ್ರವೇ ದೇಶದ ಮೊದಲ 'ಎಸಿ ರೈಲು ನಿಲ್ದಾಣ'

By

Published : Mar 15, 2021, 7:42 AM IST

ಬೆಂಗಳೂರು:ಇದೇ ಮೊದಲ ಬಾರಿ ದೇಶದಲ್ಲಿ ಸಂಪೂರ್ಣ ರೈಲ್ವೆ ನಿಲ್ದಾಣ ಎಸಿಮಯವಾಗಿರಲಿದೆ. ಅದು ನಮ್ಮ ಹೆಮ್ಮೆಯ ಬೆಂಗಳೂರಲ್ಲಿ ಎಂಬುದು ಇನ್ನೂ ವಿಶೇಷ. ಅಂದ ಹಾಗೆ ಸಿಲಿಕಾನ್​ ಸಿಟಿಯಲ್ಲಿ ಶೀಘ್ರವೇ ದೇಶದ ಮೊದಲ 'ಎಸಿ ರೈಲು ನಿಲ್ದಾಣ' ನಿರ್ಮಾಣವಾಗಿದ್ದು, ಶೀಘ್ರದಲ್ಲೇ ನಾಡಿಗೆ ಸಮರ್ಪಣೆ ಆಗಲಿದೆ.ನಗರದ ಬೈಯಪ್ಪನಹಳ್ಳಿಯಲ್ಲಿ ಒಟ್ಟು 314 ಕೋಟಿ ರೂ. ವೆಚ್ಚದಲ್ಲಿ ಈ ನಿಲ್ದಾಣ ನಿರ್ಮಾಣವಾಗಿದೆ. ಇದು ದೇಶದ ಮೊದಲ ಹವಾನಿಯಂತ್ರಿತ (ಎಸಿ) ವಿಮಾನವಾಗಿರಲಿದೆ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಘೋಷಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, 'ಭಾರತದ ಮೊಟ್ಟ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ (ಎಸಿ) ರೈಲ್ವೆ ನಿಲ್ದಾಣ'ಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ನೈಋತ್ಯ ರೈಲ್ವೆ ನಿರ್ಮಾಣ ಮಾಡಿರುವ ಈ ನೂತನ ಟರ್ಮಿನಲ್‌ಗೆ ಇತ್ತೀಚೆಗೆ ಸರ್‌.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿತ್ತು. 2015-16ರಲ್ಲಿ ಬೈಯಪ್ಪನಹಳ್ಳಿಯ ಹೊಸ ಟರ್ಮಿನಲ್‌ಗೆ ಮಂಜೂರಾತಿ ದೊರೆತಿತ್ತು. ಈ ಹೊಸ ಟರ್ಮಿನಲ್‌ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ.

ವಿಶಾಲ ಪ್ಲಾಟ್‌ಫಾರಂಗಳನ್ನು ನಿರ್ಮಾಣ ಮಾಡಲಾಗಿದ್ದು, ಸುಮಾರು 7 ಪ್ಲಾಟ್​ ಫಾರ್ಮ್​ಗಳು ಈ ನಿಲ್ದಾಣದಲ್ಲಿ ಇರಲಿವೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿನ ಹೆಚ್ಚಿನ ದಟ್ಟಣೆಯನ್ನ ಈ ನಿಲ್ದಾಣ ಕಡಿಮೆ ಮಾಡಲಿದೆ. ಅಂದ ಹಾಗೆ ಈ ಹವಾ ನಿಯಂತ್ರಿತ ನಿಲ್ದಾಣದಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿ, ಪಾರ್ಕಿಂಗ್‌, ಬಸ್‌ಬೇ ಸೇರಿ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಮಾನ ನಿಲ್ದಾಣದ ಅನುಭವವನ್ನ ಈ ರೈಲ್ವೆ ನಿಲ್ದಾಣ ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಕ ನಗರದ ಮೂರನೇ ಕೋಚಿಂಗ್‌ ಟರ್ಮಿನಲ್‌ ಇದಾಗಿದೆ. ಈ ಟರ್ಮಿನಲ್‌ ಉದ್ಘಾಟನೆ ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಯಶವಂತಪುರ ನಿಲ್ದಾಣಗಳ ಜನದಟ್ಟಣೆ ಕಡಿಮೆಯಾಗಬಹುದು. ನಿತ್ಯ 50 ಸಾವಿರ ಪ್ರಯಾಣಿಕರಿಗೆ ನಿಲ್ದಾಣ ಬಳಕೆಯಾಗುವ ನಿರೀಕ್ಷೆಯಿದೆ.

ಒಟ್ಟು 4,200 ಚದರ ಮೀಟರ್‌ ವ್ಯಾಪ್ತಿಯಲ್ಲಿ ಈ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಏಳು ಪ್ಲಾಟ್‌ಫಾರಂ, ಏಳು ಸ್ಲಾಬಿಂಗ್ ಲೈನ್‌ ಹಾಗೂ ಮೂರು ಪಿಟ್‌ಲೈನ್‌ಗಳಿವೆ. ನಿಲ್ದಾಣದಾದ್ಯಂತ ಎಲ್‌ಇಡಿ ದೀಪ ಅಳವಡಿಸಲಾಗಿದೆ. ವಿಐಪಿ ಲಾಂಜ್‌, ಫುಡ್‌ಕೋರ್ಟ್‌, ಎಸ್ಕಲೇಟರ್‌, ಲಿಫ್ಟ್‌, ಪ್ಲಾಟ್‌ಫಾರಂಗಳ ನಡುವೆ ಸಂಪರ್ಕಕ್ಕೆ ಸಬ್‌ ವೇ ನಿರ್ಮಿಸಲಾಗಿದೆ. ನಿತ್ಯ 50 ರೈಲು ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.

ಈ ನಿಲ್ದಾಣ ಪರಿಸರ ಸ್ನೇಹಿಯಾಗಿರಲಿದ್ದು, ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. 250 ಕಾರು ಹಾಗೂ ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಓದಿ:ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡಿದ್ದರೂ ಹಲವು ಬೃಹತ್ ಕಾಮಗಾರಿಗಳು ಇನ್ನೂ ಅಪೂರ್ಣ: ಸಿಎಜಿ ವರದಿ ಆಕ್ಷೇಪ

ABOUT THE AUTHOR

...view details