ಕೊಯಮತ್ತೂರು (ತಮಿಳುನಾಡು):ನೀರು, ಭೂಮಿ, ಹಿಮದ ಮೇಲೆ ಚಲಿಸುವ ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಯುರೋಟೆಕ್ ಪಿವೋಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರೂಪಿಸಿರುವ ಈ ಬೋಟ್ ಅನ್ನು ತಮಿಳುನಾಡಿನ ಕೆರೆಯೊಂದರಲ್ಲಿ ಪರೀಕ್ಷೆ ನಡೆಸಲಾಯಿತು. ಇದು ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಸಂಚಾರ ನಡೆಸಿದೆ.
ನೀರು ಮತ್ತು ಭೂಮಿಯ ಮೇಲೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿ 50 ಲಕ್ಷ ರೂಪಾಯಿ ವೆಚ್ದದಲ್ಲಿ ಈ ಹೋವರ್‌ಕ್ರಾಫ್ಟ್ ಬೋಟ್ ಅನ್ನು ನಿರ್ಮಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ನೇತೃತ್ವದಲ್ಲಿ ಸೂಲೂರು ಎಂಬಲ್ಲಿನ ಚಿಕ್ಕ ಕೆರೆಯಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಹೋವರ್‌ಕ್ರಾಫ್ಟ್ ನೀರಿನ ಮೇಲೆ ನುಗ್ಗುತ್ತಿರುವುದನ್ನು ಜನರು ಆಸಕ್ತಿಯಿಂದ ವೀಕ್ಷಿಸಿದರು.
ಪ್ರವಾಹದ ವೇಳೆಯೂ ಬಳಕೆ:ಯೂರೋಟೆಕ್ ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕಿ ಸುಪ್ರಿತಾ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿಯೇ ಪ್ರಥಮ ಬಾರಿಗೆ ನೀರು ಮತ್ತು ಭೂಮಿಯಲ್ಲಿ ಕಾರ್ಯಾಚರಣೆ ನಡೆಸುವ ಹೋವರ್‌ಕ್ರಾಫ್ಟ್ ಬೋಟ್ ತಯಾರಿಸಿರುವುದು ಸಂತಸ ತಂದಿದೆ. ಸದ್ಯ ಪ್ರಾಯೋಗಿಕವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಬೋಟ್ ಚಲಿಸಿದೆ. ಇದಕ್ಕೆ ನೀರು, ಭೂಮಿ ಮತ್ತು ಹಿಮಭರಿತ ಪ್ರದೇಶಗಳಲ್ಲಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಪ್ರಯಾಣಿಸುವ ಕ್ರಾಫ್ಟ್ ಬೋಟ್ ಅನ್ನು ಮುಂದೆ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿಸಿದರು.