ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಬ್ಬರ ಜೋರಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಹೊಸ ಸಂಸತ್ ಭವನ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ದೇಶದ ಜನರಿಗೆ ಸದ್ಯ ಬೇಕಾಗಿರುವುದು ಉಸಿರಾಟ, ಹೊರತಾಗಿ ಪ್ರಧಾನಿ ನಿವಾಸವಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜನರು ಆಕ್ಸಿಜನ್ ತುಂಬಿಸಿಕೊಳ್ಳಲು ನಿಂತಿರುವ ಫೋಟೋ ಹಾಗೂ ಸೆಂಟ್ರಲ್ ವಿಸ್ತಾ ಯೋಜನೆಯ ನಿರ್ಮಾಣ ಕಾಮಗಾರಿ ಚಿತ್ರವನ್ನ ರಾಹುಲ್ ಶೇರ್ ಮಾಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯೆ ಸೆಂಟ್ರಲ್ ವಿಸ್ತಾ ಯೋಜನೆಗೆ ಕೇಂದ್ರ ಚಾಲನೆ ನೀಡಿದೆ. ಇದರಲ್ಲಿ ದೇಶದ ವಿದ್ಯುತ್ ಕಾರಿಡಾರ್, ಹೊಸ ಸಂಸತ್ ಕಟ್ಟಡ, ಕೇಂದ್ರ ಸಚಿವಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗೆ ಮೂರು ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದೆ.
ಇದನ್ನೂ ಓದಿ: ರಾಜ್ಯಸಭಾ ಸದಸ್ಯ ರಘುನಾಥ್ ಮೊಹಪಾತ್ರ ಕೋವಿಡ್ಗೆ ಬಲಿ
ಕೋವಿಡ್ ಎರಡನೇ ಹಂತದ ಅಲೆ ಜೋರಾಗಿದ್ದು, ಹಲವಾರು ರಾಜ್ಯಗಳು ಆಮ್ಲಜನಕ ಕೊರತೆ ಎದುರಿಸುತ್ತಿವೆ. ಆಸ್ಪತ್ರೆಯಲ್ಲಿ ಬೆಡ್, ಔಷಧಿ ಸಿಗದೇ ರೋಗಿಗಳು ಪ್ರತಿದಿನ ಸಾವನ್ನಪ್ಪುತ್ತಿದ್ದಾರೆ. ಜೀವ ಉಳಿಸಲು ಮುಂದಾಗಿ ಎಂದು ಕೇಂದ್ರದ ವಿರುದ್ಧ ರಾಗಾ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ವಿಸ್ತಾ ಯೋಜನೆ ಕೈಬಿಟ್ಟು, ದೇಶದ ವೈದ್ಯಕೀಯ ಮೂಲ ಸೌಕರ್ಯ ಸುಧಾರಿಸಲು ಆದ್ಯತೆ ನೀಡುವಂತೆ ತಿಳಿಸಿದ್ದಾರೆ.
ಇದರ ಮಧ್ಯೆ ಮತ್ತೊಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸಾಂಕ್ರಾಮಿಕ ಕೊರೊನಾ ಇದೀಗ ನಗರಗಳ ಬಳಿಕ ಗ್ರಾಮೀಣ ಪ್ರದೇಶಗಳಲ್ಲೂ ತನ್ನ ವ್ಯಾಪ್ತಿ ವಿಸ್ತರಿಸಿದ್ದು, ಅಲ್ಲಿನ ಜನರು ದೇವರ ಮೇಲೆ ಅವಲಂಬಿತರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕೋವಿಡ್ ಮಹಾಮಾರಿ ಮಧ್ಯೆ ಸೆಂಟ್ರಲ್ ವಿಸ್ತಾ ಯೋಜನೆಗೆ ಚಾಲನೆ ನೀಡಿದ್ದು, ಇದಕ್ಕೆ ಇನ್ನಿಲ್ಲದ ಟೀಕೆ ವ್ಯಕ್ತವಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 888 ಕೋಟಿ ರೂ. ವೆಚ್ಚ ಮಾಡುತ್ತಿದೆ.