ಕೋಲ್ಕತ್ತಾ (ಪಶ್ಚಿಮ ಬಂಗಾಳ):ಬಿರ್ಭೂಮ್ ಹಿಂಸಾಚಾರದಲ್ಲಿ 8 ಜನರನ್ನು ಸಜೀವವಾಗಿ ದಹಿಸಿದ ಘಟನೆ ನಡೆದು 3 ದಿನಗಳ ಬಳಿಕ ರಾಜ್ಯದಲ್ಲಿ 40ಕ್ಕೂ ಅಧಿಕ ದೇಶಿ ಬಾಂಬ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಾಂಬ್ಗಳು ಮತ್ತು ಬಿರ್ಭೂಮ್ನಲ್ಲಿ ನಡೆದ ಹತ್ಯಾಕಾಂಡಕ್ಕೆ ಯಾವುದಾದರೂ ಸಂಬಂಧವಿದೆಯಾ ಎಂಬುವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ ಅಕ್ರಮ ಬಾಂಬ್ಗಳು ಮತ್ತು ಬಂದೂಕುಗಳನ್ನು ವಶಕ್ಕೆ ಪಡೆಯಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೂಚಿಸಿದ ಬಳಿಕ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಎಲ್ಲೆಡೆ ಜಾಲಾಡುತ್ತಿದ್ದಾರೆ. ಈ ವೇಳೆ ಬಿರ್ಭೂಮ್ ಜಿಲ್ಲೆಯ ರಾಮ್ಪುರಹತ್ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದ ಹಿಂಭಾಗ 40ಕ್ಕೂ ಅಧಿಕ ಕಚ್ಚಾ ಬಾಂಬ್ಗಳು ಪತ್ತೆಯಾಗಿವೆ. ಇವುಗಳನ್ನು ಬಕೆಟ್ಗಳಲ್ಲಿ ಅಡಗಿಸಿಡಲಾಗಿತ್ತು.
ಸಿಕ್ಕಿರುವ ಈ ಕಚ್ಚಾ ಬಾಂಬ್ಗಳಿಗೂ 8 ಜನರ ಸಜೀವ ದಹನ ಪ್ರಕರಣಕ್ಕೂ ಏನಾದರೂ ಲಿಂಕ್ ಇದೆಯಾ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಇವುಗಳನ್ನು ಬಾಂಬ್ ದಳದಿಂದ ನಿಷ್ಕ್ರಿಯಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್ಚರಿಕೆ ವಹಿಸಲು ಬಿಜೆಪಿ ಕರೆ:40ಕ್ಕೂ ಅಧಿಕ ಕಚ್ಚಾ ಬಾಂಬ್ಗಳು ಪತ್ತೆಯಾದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು, ಮುಖಂಡರು ಎಚ್ಚರಿಕೆ ವಹಿಸಲು ಕರೆ ನೀಡಲಾಗಿದೆ. ಪ್ರಕರಣವನ್ನು ಬಿಜೆಪಿಯ ತಲೆಗೆ ಕಟ್ಟಲು ಪಕ್ಷದ ಕಚೇರಿ, ಕಟ್ಟಡಗಳಲ್ಲಿ ಬಾಂಬ್ಗಳನ್ನು ತಂದಿಡುವ ಹುನ್ನಾರ ನಡೆದಿದೆ. ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಬಿಜೆಪಿ ತನ್ನ ಮುಖಂಡರು, ಕಾರ್ಯಕರ್ತರಿಗೆ ಸೂಚನೆ ನೀಡಿದೆ. ಪ್ರತಿಪಕ್ಷ ಬಿಜೆಪಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪಕ್ಷದ ಕಚೇರಿಗಳಲ್ಲಿ ಬಾಂಬ್ಗಳನ್ನು ಇರಿಸಲೂಬಹುದು ಎಂದು ಎಚ್ಚರಿಸಿದೆ.
ಓದಿ:ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕನಾದ್ರೂ 20 ಕಾಲೇಜುಗಳ ಒಡೆಯ.. ಇಲ್ಲೋರ್ವ ಕುಬೇರ ಟೀಚರ್!