ನವದೆಹಲಿ :ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆರಂಭವಾಗಲಿರುವ 100 ದಿನಗಳ ಕೌಂಟ್‌ಡೌನ್ ಅಂಗವಾಗಿ 3 ದಿನಗಳ ಯೋಗ ಮಹೋತ್ಸವವನ್ನು ಉತ್ಸಾಹದಿಂದ ಆಚರಿಸುವಂತೆ ಮತ್ತು ಯೋಗವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಜನತೆಗೆ ಕರೆ ನೀಡಿದ್ದಾರೆ. ಮೂರು ದಿನಗಳ ಯೋಗ ಮಹೋತ್ಸವ - 2023 ಮಾರ್ಚ್ 13 ರಿಂದ 14 ರವರೆಗೆ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಮತ್ತು ಮಾರ್ಚ್ 15 ರಂದು ನವದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗದಲ್ಲಿ ನಡೆಯಲಿದೆ.
ಯೋಗ ಮಹೋತ್ಸವದ ಕುರಿತು ಕೇಂದ್ರ ಆಯುಷ್ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಿ, ಯೋಗ ದಿನಾಚರಣೆಗೆ ನೂರು ದಿನಗಳು ಬಾಕಿಯಿದ್ದು, ಅದನ್ನು ಉತ್ಸಾಹದಿಂದ ಆಚರಿಸಲು ನಿಮ್ಮೆಲ್ಲರನ್ನು ಕೋರುತ್ತೇನೆ. ನೀವು ಯೋಗವನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿರದಿದ್ದರೆ ಈಗಲೇ ಹಾಗೆ ಮಾಡಿ ಎಂದು ಜನರಿಗೆ ಕರೆ ನೀಡಿದ್ದಾರೆ. 2014 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಿದ ನಂತರ 2015 ರಿಂದ ಪ್ರತಿವರ್ಷ ಜೂನ್ 21 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.
ಸೆಪ್ಟೆಂಬರ್ 27, 2014 ರಂದು, ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯ ಪ್ರಸ್ತಾಪವನ್ನು ಮುಂದಿಟ್ಟರು. ಭಾರತವು ಪ್ರಸ್ತಾಪಿಸಿದ ಕರಡು ನಿರ್ಣಯವನ್ನು ದಾಖಲೆಯ 177 ಸದಸ್ಯ ರಾಷ್ಟ್ರಗಳು ಅನುಮೋದಿಸಿದವು. ಜೂನ್ 21, 2015 ರಂದು ವಿಶ್ವದಾದ್ಯಂತ ಮೊದಲ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ವಿಶ್ವಸಂಸ್ಥೆಯ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆ, ಆಲೋಚನೆ ಮತ್ತು ಕ್ರಿಯೆ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಹಾಗೂ ಆರೋಗ್ಯಕ್ಕೆ ಸಮಗ್ರ ವಿಧಾನವಾಗಿದೆ. ನಮ್ಮ ಜೀವನಶೈಲಿಯನ್ನು ಬದಲಾಯಿಸುವ ಮತ್ತು ಪ್ರಜ್ಞೆಯನ್ನು ಸೃಷ್ಟಿಸುವ ಮೂಲಕ ಅದು ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದರು.