ಅಯೋಧ್ಯೆ (ಯುಪಿ):ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಅಂದಾಜು 1,800 ಕೋಟಿ ರೂ. ವೆಚ್ಚವಾಗಲಿದೆ ಎಂದು ರಚನೆಯ ನಿರ್ಮಾಣದ ಜವಾಬ್ದಾರಿ ಹೊಂದಿರುವ ಟ್ರಸ್ಟ್‌ನ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ರಚಿಸಲಾದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಇಲ್ಲಿ ನಡೆದ ಮ್ಯಾರಥಾನ್ ಸಭೆಯ ನಂತರ ಅದರ ನಿಯಮಗಳು ಮತ್ತು ಕೈಪಿಡಿಯನ್ನು ಅನುಮೋದಿಸಿತು.
ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ರಾಮಮಂದಿರ ಫೈಜಾಬಾದ್ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಈ ಸಭೆಯಲ್ಲಿ, ದೇವಾಲಯದ ಸಂಕೀರ್ಣದಲ್ಲಿ ಪ್ರಮುಖ ಹಿಂದೂ ವಿಗ್ರಹಗಳಿಗೆ ಸ್ಥಳಾವಕಾಶ ಕಲ್ಪಿಸಲು ಟ್ರಸ್ಟ್ ಸದಸ್ಯರು ಸರ್ವಾನುಮತದಿಂದ ಒಪ್ಪಿದರು. ತಜ್ಞರು ಸಲ್ಲಿಸಿದ ವರದಿಯ ಆಧಾರದ ಮೇಲೆ ಟ್ರಸ್ಟ್ ರಾಮ ಮಂದಿರ ನಿರ್ಮಾಣಕ್ಕೆ ಮಾತ್ರ 1,800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, "ಸುದೀರ್ಘ ಚಿಂತನೆ ಮತ್ತು ಸಂಬಂಧಪಟ್ಟ ಎಲ್ಲರ ಸಲಹೆಗಳ ನಂತರ ಟ್ರಸ್ಟ್‌ನ ನಿಯಮಗಳು ಮತ್ತು ಉಪನಿಯಮಗಳನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು. ದೇವಾಲಯದ ಸಂಕೀರ್ಣದಲ್ಲಿ ಪ್ರಮುಖ ಹಿಂದೂ ಮತ್ತು ರಾಮಾಯಣ ಕಾಲದ ಪ್ರಮುಖ ಪಾತ್ರಗಳ ವಿಗ್ರಹಗಳಿಗೆ ಸ್ಥಳಾವಕಾಶ ಕಲ್ಪಿಸಲು ಟ್ರಸ್ಟ್ ನಿರ್ಧರಿಸಿದೆ" ಎಂದು ಹೇಳಿದರು.
ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ರಾಮಮಂದಿರ "ರಾಮ ಮಂದಿರದ ನಿರ್ಮಾಣ ಕಾರ್ಯ ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 2024 ರ ಜನವರಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ವೇಳೆಗೆ ಶ್ರೀರಾಮನು ಗರ್ಭಗುಡಿಯಲ್ಲಿ ಆಸೀನನಾಗುವ ನಿರೀಕ್ಷೆಯಿದೆ" ಎಂದು ರೈ ಹೇಳಿದರು.
ಟ್ರಸ್ಟ್‌ನ 15 ಮಂದಿ ಸದಸ್ಯರಲ್ಲಿ 14 ಜನರು ಸಭೆಯಲ್ಲಿ ಭಾಗವಹಿಸಿದ್ದರು. ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್, ಖಜಾಂಚಿ ಗೋವಿಂದ್ ದೇವ್ ಗಿರಿ, ಸದಸ್ಯ ಉಡುಪಿ ಪೀಠಾಧೀಶ್ವರ ವಿಶ್ವತೀರ್ಥ ಪ್ರಸನ್ನಾಚಾರ್ಯ, ಡಾ.ಅನಿಲ್ ಮಿಶ್ರಾ, ಮಹಂತ್ ದಿನೇಂದ್ರ ದಾಸ್, ಕಾಮೇಶ್ವರ ಚೌಪಾಲ್, ಪದನಿಮಿತ್ತ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ:ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಇಂದಿಗೆ 2 ವರ್ಷ ಪೂರ್ಣ: ನಿರೀಕ್ಷಿತ ರೂಪ ಪಡೆಯಲಾರಂಭಿಸಿದ ದೇಗುಲ