ಭೋಪಾಲ್ (ಮಧ್ಯ ಪ್ರದೇಶ): 2024ರಲ್ಲಿ ನಡೆಯಲಿರುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಪಕ್ಷ ನಾಯಕರ ಒಗ್ಗಟ್ಟಿನ ಬಗ್ಗೆ ವಾಗ್ದಾಳಿ ನಡೆಸಿದರು. ಆದರೆ ಈ ಬಾರಿ ಎನ್‌ಸಿಪಿ ಹಾಗೂ ಅದರ ಮುಖ್ಯಸ್ಥ ಶರದ್ ಪವಾರ್ ಅವರನ್ನು ಗುರಿಯಾಗಿಸಿ ಟೀಕಾಸ್ತ್ರ ಪ್ರಯೋಗಿಸಿದ್ದು ವಿಶೇಷವಾಗಿತ್ತು. ಕುಟುಂಬ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿ, ಗಾಂಧಿ ಕುಟುಂಬದೊಂದಿಗೆ ಪವಾರ್ ಹೆಸರನ್ನೂ ಉಲ್ಲೇಖಿಸಿದರು.
ಪಾಟ್ನಾದಲ್ಲಿ ನಡೆದ ವಿಪಕ್ಷ ನಾಯಕರ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ತಮ್ಮ ಮೊದಲ ವಾಗ್ದಾಳಿ ನಡೆಸಿದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ 'ಮೇರಾ ಬೂತ್, ಸಬ್ಸೆ ಸೋಂಬಾ' ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು. ಈ ಬಾರಿ ಅವರು ನೇರವಾಗಿ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಶರದ್ ಪವಾರ್ ಮತ್ತು ಎನ್‌ಸಿಪಿಗೆ ತಿರುಗೇಟು ನೀಡಿದರು.
ಇದೀಗ ಹೊಸ ಪದವೊಂದು ಜನಪ್ರಿಯವಾಗುತ್ತಿದೆ. ಅದು 'ಗ್ಯಾರಂಟಿ' ಎಂಬ ಪದ. ಪ್ರತಿಪಕ್ಷಗಳು ಏನು ಭರವಸೆ ನೀಡುತ್ತಿವೆ ಎಂಬುದನ್ನು ಜನರಿಗೆ ತಿಳಿಸುವ ಗುರುತರ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ. ಈ ಎಲ್ಲ ಪಕ್ಷಗಳ ಗ್ಯಾರಂಟಿ ಭ್ರಷ್ಟಾಚಾರವಾಗಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣ ಮಾಡುವುದು ಗ್ಯಾರಂಟಿಯಾಗಿದೆ ಎಂಬುದನ್ನು ಬಿಜೆಪಿ ಕಾರ್ಯಕರ್ತರು ಜನರಿಗೆ ತಿಳಿಸಬೇಕಿದೆ ಎಂದು ಅವರು ಹೇಳಿದರು.
ಕೆಲವು ದಿನಗಳ ಹಿಂದೆ ಈ ಎಲ್ಲ ನಾಯಕರೂ ಒಟ್ಟಾಗಿ ಫೋಟೊ ತೆಗೆಸಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ ಪಕ್ಷಗಳ ಇತಿಹಾಸ ನೋಡಿದರೆ ಇವರೆಲ್ಲ ಸೇರಿ ಕನಿಷ್ಠ 20 ಲಕ್ಷ ಕೋಟಿ ರೂಪಾಯಿಗಳ ಹಗರಣ ಮಾಡುವುದು ಗ್ಯಾರಂಟಿ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್‌ನ ಹಗರಣವು ಲಕ್ಷ ಕೋಟಿ ಮೌಲ್ಯದ್ದಾಗಿದೆ ಎಂದು ಮೋದಿ ಹೇಳಿದರು.