ಹೈದರಾಬಾದ್:ಕೇಂದ್ರ ತನಿಖಾ ಸಂಸ್ಥೆಯು (ಸಿಬಿಐ – ಸೆಂಟ್ರಲ್ ಬ್ಯುರೊ ಆಫ್ ಇನ್ವೆಸ್ಟಿಗೇಶನ್) ಅಧಿಕಾರ ಮತ್ತು ಬಲದಿಂದ ಭ್ರಷ್ಟಾಚಾರವನ್ನು ನಿಯಂತ್ರಿಸುವ ದೊಡ್ಡ ಜವಾಬ್ದಾರಿ ಹೊತ್ತಿರುವ 'ಪ್ರತಿಷ್ಠಿತ' ಸಂಘಟನೆ. ಆದರೆ, ಅದೀಗ ತಾನೇ 'ಭ್ರಷ್ಟಾಚಾರ' ಆರೋಪಗಳಿಂದಾಗಿ ತತ್ತರಿಸುತ್ತಿದೆ! ಇದು ದ್ವೇಷಿಗಳು ಮಾಡಿದ ದುರುದ್ದೇಶಪೂರಿತ ಆರೋಪವಲ್ಲ. ಬದಲಾಗಿ, ಕೇಂದ್ರ ತನಿಖಾ ಸಂಸ್ಥೆ ಸ್ವತಃ ಪರಿಶೀಲಿಸಿ ಕಂಡುಕೊಂಡಿರುವ ಕಟು ಸತ್ಯ!
ಬ್ಯಾಂಕ್ ಹಗರಣಗಳ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಕೆಲವು ಕಂಪನಿಗಳೊಂದಿಗೆ ತನ್ನ ಕೆಲವು ಅಧಿಕಾರಿಗಳು ಕೈ ಜೋಡಿಸಿದ್ದು, ಭ್ರಷ್ಟ ವಿಧಾನಗಳ ಮೂಲಕ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಎಂಟು ಪುಟಗಳ ಮೊದಲ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಸಿಬಿಐ ಸ್ಪಷ್ಟಪಡಿಸಿದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಡಿಎಸ್‌ಪಿಗಳು ಸೇರಿದಂತೆ ಸಿಬಿಐನ ನಾಲ್ವರು ಸಿಬ್ಬಂದಿ ಮತ್ತು ವಕೀಲರು ಸೇರಿದಂತೆ ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.
ಸಂಕ್ರಾಂತಿ ದಿನದಂದು ದೆಹಲಿ, ಗಾಜಿಯಾಬಾದ್, ನೋಯ್ಡಾ, ಮೀರತ್ ಮತ್ತು ಕಾನ್ಪುರ ಸೇರಿದಂತೆ 14 ಸ್ಥಳಗಳಲ್ಲಿ ತನ್ನ ಕಚೇರಿಗಳಲ್ಲಿ ಸಿಬಿಐ ವ್ಯಾಪಕ ತಪಾಸಣೆ ನಡೆಸಿತ್ತು. ಸಿಬಿಐ ಇನ್ಸ್‌ಪೆಕ್ಟರ್ ಕಪಿಲ್ ಧಂಕಡ್ ಅವರು ನಿರ್ಣಾಯಕ ಮಾಹಿತಿಯನ್ನು ರವಾನಿಸಿದ್ದಕ್ಕಾಗಿ ಉನ್ನತ ಅಧಿಕಾರಿಗಳಿಂದ ಹಲವಾರು ಕಂತುಗಳಲ್ಲಿ ರೂ. 16 ಲಕ್ಷ ಪಡೆದಿದ್ದಾರೆ, ಇಬ್ಬರು ಡಿಎಸ್‌ಪಿಗಳು ಇಬ್ಬರು ವಕೀಲರಿಂದ ತಲಾ 15 ಲಕ್ಷ ರೂ. ಹಾಗೂ ಮಧ್ಯವರ್ತಿಗಳಿಂದ ಒಪ್ಪಂದ ಕುದುರಿಸಿರುವ ಕುರಿತ ವಿಶ್ಲೇಷಣಾತ್ಮಕ ವಿವರಣೆಗಳು ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಸಂಸ್ಕೃತಿಯು ಆಳವಾಗಿ ಬೇರೂರಿದ್ದಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ. ಲಕ್ಷಾಂತರ ರೂಪಾಯಿಗಳು ಕೈ ಬದಲಾಯಿಸುವುದು, ದೇಶದ ಪ್ರತಿಷ್ಠೆಗೆ ಕಳಂಕ ತರುವ ರೀತಿ, ವಿಚಾರಣೆಯ ಮೇಲೆ ಪ್ರಭಾವ ಬೀರುವ ಅವಕಾಶಗಳು ಹಾಗೂ ಹೆಚ್ಚುತ್ತಲೇ ಇರುವ ಪ್ರಕರಣಗಳ ತನಿಖೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹ ಆಘಾತಕಾರಿ ಬೆಳವಣಿಗೆಯಾಗಿವೆ.
ಐವತ್ತೇಳು ವರ್ಷಗಳ ಹಿಂದೆ, ಸರ್ವ ಮೂರ್ಖರ ದಿನ ಎಂದು ಪರಿಗಣಿಸಲಾದ (ಏಪ್ರಿಲ್ ೧) ದಿನದಂದು ಅಸ್ತಿತ್ವಕ್ಕೆ ಬಂದ ಕೇಂದ್ರ ತನಿಖಾ ದಳ (ಸಿಬಿಐ), ಕೇಂದ್ರ ಸರ್ಕಾರದ ಕೈಯೊಳಗಿನ ಅತ್ಯಂತ ಭ್ರಷ್ಟ ಸಾಧನ ಎಂಬ ಅಪಕೀರ್ತಿಗೆ ಒಳಗಾಗಿ ಅಧಃಪತನಕ್ಕೆ ಇಳಿಯಲ್ಪಟ್ಟಿತು ಹಾಗೂ ಶ್ರೀಮತಿ ಇಂದಿರಾ ಗಾಂಧಿ ಅವರ ಪ್ರಧಾನಮಂತ್ರಿತ್ವದ ಅವಧಿಯಲ್ಲಿ ಅತ್ಯಂತ ಭ್ರಷ್ಟವಾಯಿತು. ಈ ತನಿಖಾ ಸಂಸ್ಥೆ ಕೇಂದ್ರ ಸರ್ಕಾರದ ಪಂಜರದೊಳಗಿನ ಗಿಳಿಯಾಗಿ ಮಾರ್ಪಟ್ಟಿದೆ ಎಂದು ನ್ಯಾಯಾಲಯಗಳೇ ಹಲವಾರು ಬಾರಿ ಟೀಕಿಸಿವೆ. ಕೇಂದ್ರೀಯ ತನಿಖಾ ದಳವು ರಾಜಕೀಯ ಹಸ್ತಕ್ಷೇಪವನ್ನು ಮೀರಿ ನಿಂತು ಬಲವಾದ ತನಿಖಾ ಸಂಸ್ಥೆಯಾಗಿ ಹೊಮ್ಮಬೇಕು ಹಾಗೂ ಅದರ ಕಾರ್ಯವಿಧಾನವು ಎಲ್ಲರ ಮೆಚ್ಚುಗೆಯನ್ನು ಗಳಿಸುವಂತಾಗಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಸುಧಾರಿಸಿಕೊಳ್ಳುವುದರಿಂದ ಅದು ಸದಾ ತಪ್ಪಿಸಿಕೊಳ್ಳುತ್ತಲೇ ಇದೆ. ರಾಜಕೀಯ ಒತ್ತಡಗಳು ಮತ್ತು ಇತರ ಕಾರಣಗಳಿಂದಾಗಿ ಅನೇಕ ಪ್ರಕರಣಗಲ್ಲಿ ಸೋಲುಂಟಾಗಿದೆ. ಸಂಸ್ಥೆಯನ್ನು ಸದ್ಯ ಕಾಡುತ್ತಿರುವ ಕಾಯಿಲೆಗೆ ಪ್ರಕರಣಗಳ ಹಿಂದೆ ನಾಯಕತ್ವದ ಒಳಗೊಳ್ಳುವಿಕೆ ಇದೆ ಎಂಬುದಷ್ಟೇ ಅಲ್ಲ, ಅತಿರೇಕದ ಭ್ರಷ್ಟ ವಿಧಾನಗಳು ಸಹ ಮುಖ್ಯ ಕಾರಣಗಳು ಎಂಬ ವ್ಯಾಪಕ ಅನುಮಾನಗಳು ಬೆಳೆಯುತ್ತಿವೆ.
ಪ್ರಾಮಾಣಿಕತೆ, ಔದ್ಯಮಶೀಲತೆ, ನಿಷ್ಪಕ್ಷಪಾತತನ ತನ್ನ ಮೂರು ಮಾರ್ಗದರ್ಶಿ ದೀಪಗಳು ಎಂದು ಸಿಬಿಐ ಹೆಮ್ಮೆಯಿಂದ ಹೇಳುತ್ತದೆ!
ತನ್ನ ರಾಜಕೀಯ ಧಣಿಗಳು ಹೇಳಿದಂತೆ ನಡೆಯುವುದಕ್ಕೆ ಹೆಸರುವಾಸಿಯಾಗಿರುವ ಸಿಬಿಐ, ತಾನೊಂದು ಬೆನ್ನೆಲುಬು ಇಲ್ಲದ ಸಂಸ್ಥೆ ಎಂಬುದನ್ನು ಯಾವುದೇ ನಾಚಿಕೆಯಿಲ್ಲದೇ ಪದೇ ಪದೇ ಸಾಬೀತುಪಡಿಸಿದೆ. ಸುಮಾರು ಎರಡು ವರ್ಷಗಳ ಹಿಂದೆ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನಾ ನಡುವಿನ ತೀವ್ರ ವಾಗ್ವಾದವು ಇಡೀ ಸಂಘಟನೆಯನ್ನೇ ಅಲ್ಲಾಡಿಸಿಬಿಟ್ಟಿತ್ತು. ಆ ಸಮಯದಲ್ಲಿ, ಅಸ್ತಾನಾ ಅವರು ಮೊಯಿನ್ ಖುರೇಷಿ ಎಂಬ ಮಾಂಸ ವ್ಯಾಪಾರಿ ವಿರುದ್ಧ ಇದ್ದ ವಿವಿಧ ಆರೋಪಗಳ ಕುರಿತು ವಿಚಾರಣೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು. ಕೆಲವೇ ತಿಂಗಳುಗಳಲ್ಲಿ ನಿವೃತ್ತರಾಗಲಿದ್ದ ಅಧಿಕಾರಿ ಅಲೋಕ್ ವರ್ಮಾ ನೇತೃತ್ವದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಹಾಗೆ ನೋಡಿದರೆ, ಆ ಭ್ರಷ್ಟಾಚಾರ ಪ್ರಕರಣದ ಮುಖ್ಯ ಅಪರಾಧಿ ಬೇರೆ ಯಾರೂ ಅಲ್ಲ, ವಿಶೇಷ ನಿರ್ದೇಶಕ ಎಂಬ ಅಧಿಕಾರದಲ್ಲಿ ಇಡೀ ವ್ಯವಸ್ಥೆಯನ್ನು ಆಳುತ್ತಿದ್ದ ಅಸ್ತಾನಾ! ತಾನು ಸಿಬಿಐ ಬಲೆಯಿಂದ ಹೊರಬರಲು 3 ಕೋಟಿ ರೂ. ನೀಡಿದ್ದರೂ ಕೂಡಾ, ಸಿಬಿಐ ಅಧಿಕಾರಿಗಳು ಇನ್ನೂ ಕಿರುಕುಳ ನೀಡುತ್ತಿದ್ದಾರೆ ಎಂದು ಸತೀಶ್ ಎಂಬ ವ್ಯಕ್ತಿ ಆ ದಿನಗಳಲ್ಲಿ ನೀಡಿದ್ದ ಪ್ರಮಾಣಿತ ಹೇಳಿಕೆಯು ಆ ದಿನಗಳಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸಿತ್ತು. ಆ ಪ್ರಕರಣದಲ್ಲಿ ರಾಕೇಶ್ ಅಸ್ತಾನಾ ತಪ್ಪಿತಸ್ಥರಲ್ಲ ಎಂದು ಕಳೆದ ಮಾರ್ಚ್ ತಿಂಗಳಲ್ಲಿ ಸಿಬಿಐ ನೀಡಿದ ನಿರಪರಾಧಿ ಹೇಳಿಕೆಯ ಆಧಾರದ ಮೇಲೆ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣವನ್ನು ಕೈಬಿಡುವ ಮೂಲಕ ಈ ವಿವಾದ ಅಧಿಕೃತವಾಗಿ ತಣ್ಣಗಾಯಿತು. ಈ ಪ್ರಕರಣದಲ್ಲಿ ಲಂಚದ ಕೈವಾಡವಿತ್ತು ಹಾಗೂ ಮತ್ತಷ್ಟು ಲಂಚಕ್ಕಾಗಿ ಬೇಡಿಕೆ ಇಡಲಾಗಿತ್ತು ಎಂಬ ಆರೋಪಗಳಿದ್ದಾಗ್ಯೂ ಯಾರೊಬ್ಬರನ್ನೂ ತಪ್ಪಿತಸ್ಥರೆಂದು ಸಾಬೀತುಪಡಿಸಲು ಆಗಲೇ ಇಲ್ಲ.