ತಿರುವನಂತಪುರಂ (ಕೇರಳ): ಇಲ್ಲಿನ ಚಾವಡಿಮುಕ್ಕು ಇಂಜಿನಿಯರಿಂಗ್ ಕಾಲೇಜು ಬಳಿ ನಿರ್ಮಿಸಲಾದ ವಿವಾದಿತ ಲಿಂಗ-ತಟಸ್ಥ ಬಸ್ ಶೆಲ್ಟರ್ ಅನ್ನು ತಿರುವನಂತಪುರಂ ಕಾರ್ಪೊರೇಷನ್ ತೆರವುಗೊಳಿಸಿದೆ.
ಪಾಲಿಕೆಯು ಪೊಲೀಸ್ ರಕ್ಷಣೆಯೊಂದಿಗೆ ಕಳೆದ ಶುಕ್ರವಾರ ಬಸ್ ತಂಗುದಾಣವನ್ನು ಕೆಡವಿತ್ತು. ಮೂರು ಜನರು ಕುಳಿತುಕೊಳ್ಳಬಹುದಾದ ಉದ್ದನೆಯ ಸೀಟನ್ನು ಸ್ಥಳೀಯರು ವಿಭಜಿಸಿದ ನಂತರ ಬಸ್ ಶೆಲ್ಟರ್ ವಿವಾದಾಸ್ಪದವಾಗಿತ್ತು. ಆಸನವನ್ನು ಮೂರು ಭಾಗಗಳಾಗಿ ವಿಭಜಿಸಲಾಗಿತ್ತು. ಹುಡುಗರು ಮತ್ತು ಹುಡುಗಿಯರು ಒಟ್ಟಾಗಿ ಕುಳಿತುಕೊಳ್ಳಬಾರದೆಂದು ಆಸನವನ್ನು ವಿಭಜಿಸಲಾಗಿತ್ತು ಎನ್ನಲಾಗಿದೆ.
ಹುಡುಗಿಯರು ಹುಡುಗರ ಮಡಿಲಲ್ಲಿ ಕುಳಿತಿರುವ ಫೋಟೋಗಳನ್ನು ಪೋಸ್ಟ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಕೆಲ ಸ್ಥಳೀಯರು ತಮ್ಮ ವಿರುದ್ಧ ನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದರ ನಂತರ ಎರಡೂ ಕಡೆಯವರನ್ನು ಬೆಂಬಲಿಸಿ ವಾದ-ವಿವಾದಗಳು ನಡೆದಿವೆ.
ಆದರೆ ಮಹಾನಗರ ಪಾಲಿಕೆಯು ನವೀಕರಿಸಿದ ಬಸ್ ತಂಗುದಾಣವನ್ನು ಕೆಡವಿದೆ. ಈ ಕುರಿತು ಮಾತನಾಡಿದ ಮೇಯರ್ ಆರ್ಯ ರಾಜೇಂದ್ರನ್, ಹೊಸ ಲಿಂಗ-ತಟಸ್ಥ ಬಸ್ ಶೆಲ್ಟರ್ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಸ್ ಶೆಲ್ಟರ್‌ನ ವಿನ್ಯಾಸ ಅಂತಿಮ ಹಂತದಲ್ಲಿದ್ದು, ಅದು ಪೂರ್ಣಗೊಂಡ ನಂತರ ಕಾಮಗಾರಿ ನಡೆಯಲಿದೆ. ಎರಡು ವಾರಗಳಲ್ಲಿ ಕೆಲಸ ಮುಗಿಸಲಾಗುವುದು ಎಂದು ಹೇಳಿದರು.
ನಿವಾಸಿಗಳ ಸಂಘದ ಕಟ್ಟಡ ಕಾಮಗಾರಿಯು ಅಕ್ರಮವಾಗಿದ್ದು, ಇದು ವಿದ್ಯಾರ್ಥಿಗಳಿಗೆ ತಾರತಮ್ಯ ಉಂಟು ಮಾಡುವಂತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮೇಯರ್ ತಿಳಿಸಿದರು.