ನವದೆಹಲಿ: ಕಾರ್ಪೊರೇಟ್ ತೆರಿಗೆ ಕಡಿತವು ಆರ್ಥಿಕತೆಗೆ ಸಹಾಯ ಮಾಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ಹಣಕಾಸು ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಈ ಹಣಕಾಸು ವರ್ಷದಲ್ಲಿ 7.3 ಲಕ್ಷ ಕೋಟಿ ರೂಪಾಯಿಗಳಷ್ಟು ಕಾರ್ಪೊರೇಟ್ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಲೋಕಸಭೆಗೆ ತಿಳಿಸಿದರು. ಅಲ್ಲದೇ ಕಳೆದ ವರ್ಷ ಮತ್ತು ಈ ವರ್ಷ ಕೇಂದ್ರ ಸರ್ಕಾರ ತೆರಿಗೆಯನ್ನು ಹೆಚ್ಚಿಸಿಲ್ಲ ಎಂದು ಮಾಹಿತಿ ನೀಡಿದರು.
ಜರ್ಮನಿ, ಫ್ರಾನ್ಸ್, ಕೆನಡಾ, ಯುಕೆ ಸೇರಿದಂತೆ 32 ದೇಶಗಳು ತೆರಿಗೆಗಳನ್ನು ಹೆಚ್ಚಿಸಿವೆ ಎಂದು ಉಲ್ಲೇಖಿಸಿ, ಭಾರತ ಸರ್ಕಾರ ತೆರಿಗೆ ಹೆಚ್ಚಿಸಿಲ್ಲ ಎಂಬುದನ್ನು ಒತ್ತಿ ಹೇಳಿದರು. ಜೊತೆಗೆ ಈ ಬಜೆಟ್ ಸಾರ್ವಜನಿಕರಿಗೆ ಹೊರೆಯಾಗಿಲ್ಲ. ಹೆಚ್ಚಿನ ಬೆಳವಣಿಗೆ ದೃಷ್ಟಿಯಿಂದ ಕೇಂದ್ರವು ಬೃಹತ್ ಬಜೆಟ್ ಅನ್ನು ಮೀಸಲಿಟ್ಟಿದೆ ಎಂದು ತಿಳಿಸಿದರು. ಅಲ್ಲದೇ ಕೆಲವು ವರ್ಷಗಳ ಹಿಂದೆ ತೆರಿಗೆ ಪಾವತಿದಾರರ ಸಂಖ್ಯೆ 5 ಕೋಟಿಯಿಂದ 9.1 ಕೋಟಿಗೆ ಹೆಚ್ಚಾಗಿದೆ ಎಂದು ಹೇಳಿದರು.