ನವದೆಹಲಿ: ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದರೂ, ಜನತೆ ಮಾರ್ಗಸೂಚಿಗಳನ್ನು ಅನುಸರಿಸಲಿಲ್ಲ. ಇದರಿಂದಾಗಿ ಏಕಾಏಕಿ ಕೋವಿಡ್ ಪ್ರಕರಣಗಳು ಹೆಚ್ಚಳವಾದವು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಅಂತಾರಾಷ್ಟ್ರೀಯ ಮಾಸ್ಕ್ ದಿನಾಚರಣೆ ಹಿನ್ನೆಲೆ, ಕೇಂದ್ರ ಆರೋಗ್ಯ ಸಚಿವಾಲಯದ ಸಿಬ್ಬಂದಿಗೆ ಮಾಸ್ಕ್ ವಿತರಿಸಿದ ಬಳಿಕ ಮಾತನಾಡಿದ ಅವರು, ಕೈಗಾರಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಮಾಲೀಕರು ನಿಯಮಗಳನ್ನು ಅನುಸರಿಸಿ ಕೊರೊನಾ ಚೈನ್ ಅನ್ನು ತುಂಡರಿಸಬಹುದು. ಕಂಪನಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸುವುದು ಆರೋಗ್ಯ ಸಚಿವಾಲಯದ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.
ಕಳೆದ ವರ್ಷ ಕೋವಿಡ್ ನಿಯಂತ್ರಣಕ್ಕೆ ಮೋದಿ ನೇತೃತ್ವದ ಸರ್ಕಾರ ಹಗಲಿರುಳು ಎನ್ನದೇ ಕಾರ್ಯ ನಿರ್ವಹಿಸಿತು. ಈ ವರ್ಷದ ಆರಂಭದಲ್ಲಿ ಲಸಿಕೆಗಳನ್ನು ಹಾಕುವ ಪ್ರಕ್ರಿಯೆ ಶುರು ಮಾಡಿದೆವು. ಆದರೂ, ಜನತೆ ನಿರ್ಲಕ್ಷ್ಯ ತೋರಿದ್ದು, ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣರಾದರು.