ಬೀಜಿಂಗ್(ಚೀನಾ):ಮಾರಕ ಕೊರೊನಾ ಪತ್ತೆಯಾದರೂ ಅದನ್ನು ವಿಶ್ವಕ್ಕೆ ಬೇಗನೆ ತಿಳಿಸದೇ ಮುಚ್ಚಿಟ್ಟಿದ್ದ ಚೀನಾ ಇದೀಗ ಬೀಜಿಂಗ್ ಒಲಿಂಪಿಕ್ಸ್ಗಾಗಿ ದೇಶಾದ್ಯಂತ ಕಠಿಣ ಕ್ರಮಗಳನ್ನು ಜಾರಿ ಮಾಡಲು ಮುಂದಾಗಿದೆ.
ಮುಂದಿನ ವರ್ಷದ ಫೆಬ್ರವರಿಯಲ್ಲಿ ಬೀಜಿಂಗ್ನಲ್ಲಿ ಒಲಂಪಿಕ್ಸ್ ಕ್ರೀಡಾಕೂಟ ಆಯೋಜನೆಯಾಗಿದ್ದು, ಅದರ ಸಿದ್ಧತೆ ನಡೆಸಿರುವ ಚೀನಾ ಸರ್ಕಾರ ಕೊರೊನಾ ಕಾಣಿಸಿಕೊಳ್ಳುತ್ತಿರುವ ನಗರ, ಪ್ರಾಂತ್ಯಗಳಲ್ಲಿ ಬಿಗಿ ನಿರ್ಬಂಧಗಳನ್ನು ಹೇರಿದೆ. ಅದರಂತೆ ಇದೀಗ ಕ್ಸಿಯಾನ್ ನಗರದಲ್ಲಿ ಕೊರೊನಾ ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಕಾರಣ ನಗರದ ಜನರನ್ನು ಅಗತ್ಯ ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಬಾರದಂತೆ ಸೂಚಿಸಿದೆ.
ಇದು ಮೊದಲ ಬಾರಿಗೆ ವುಹಾನ್ನಲ್ಲಿ ಕೊರೊನಾ ಕಾಣಿಸಿಕೊಂಡಾಗ ಹೇರಿದ ನಿರ್ಬಂಧಕ್ಕಿಂತಲೂ ಕಠಿಣವಾಗಿದೆ ಎಂದ ಹೇಳಲಾಗಿದೆ. ಉತ್ತರ ಚೀನಾದ ಕ್ಸಿಯಾನ್ನಲ್ಲಿ ಬುಧವಾರವಷ್ಟೇ 52 ಹೊಸ ಕೊರೊನಾ ಕೇಸ್ ದಾಖಲಾಗಿವೆ. ಹೀಗಾಗಿ ಕೊರೊನಾ ಪ್ರಸರಣವನ್ನು ತಡೆಗಟ್ಟಲು ಚೀನಾ ಸರ್ಕಾರ ಅಲ್ಲಿನ 13 ಮಿಲಿಯನ್ ಜನರ ಮೇಲೆ ನಿರ್ಬಂಧಗಳನ್ನು ಹೇರಿದೆ.
ಸರ್ಕಾರ ವಿಧಿಸಿದ ಕಠಿಣ ನಿಯಮಗಳೇನು?
ಜನರು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಹೊರಬರಬೇಕಿದ್ದು, ಕುಟುಂಬದ ಒಬ್ಬ ಸದಸ್ಯ ಮಾತ್ರ ಓಡಾಡಲು ಅನುಮತಿ ನೀಡಲಾಗಿದೆ. ಇದಲ್ಲದೇ, ಅಗತ್ಯ ವಸ್ತುಗಳ ಖರೀದಿಗೆ 2 ದಿನಗಳಿಗೊಮ್ಮೆ ಅವಕಾಶ ನೀಡಲಾಗಿದೆ. ತುರ್ತು ಸಂದರ್ಭ ಹೊರತುಪಡಿಸಿ ಜನರು ಹೊರಬರುವ ಹಾಗಿಲ್ಲ.