ನವದೆಹಲಿ: ಕೋವಿಡ್-19 ಲಸಿಕೆ ಕೋವಾಕ್ಸಿನ್‌ನ ಮೂರನೇ ಹಂತದ ಮಾನವ ಪ್ರಯೋಗ ಗುರುವಾರ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)ನಲ್ಲಿ ಪ್ರಾರಂಭವಾಗಿದೆ.
ನರವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ವಿ. ಪದ್ಮ ಶ್ರೀವಾಸ್ತವ ಮತ್ತು ಇತರ ಮೂವರು ಸ್ವಯಂಸೇವಕರು ಕೋವಾಕ್ಸಿನ್‌ನ ಮೊದಲ ಲಸಿಕೆ ಪಡೆದರು. ಅಲ್ಲದೇ ಪರೀಕ್ಷೆಯ ಭಾಗವಾಗಿ ಏಮ್ಸ್ ಇನ್ನೂ 15 ಸಾವಿರ ಸ್ವಯಂಸೇವಕರಿಗೆ ಲಸಿಕೆ ನೀಡಲಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಕೋವಿಡ್-19 ಲಸಿಕೆ ಕೋವಾಕ್ಸಿನ್ನನ್ನು ಅಭಿವೃದ್ಧಿಪಡಿಸುತ್ತಿದೆ.
ಭಾರತ್ ಬಯೋಟೆಕ್ ನವೆಂಬರ್ 16 ರಂದು ಕೋವಾಕ್ಸಿನ್‌ನ ಮೂರನೇ ಹಂತದ ಪ್ರಯೋಗಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಐಸಿಎಂಆರ್ ಸಹಭಾಗಿತ್ವದಲ್ಲಿ ನಡೆಸಲಾಗುವ ಮೂರನೇ ಹಂತದ ಪ್ರಯೋಗವು ಭಾರತದಾದ್ಯಂತ 26 ಸಾವಿರ ಸ್ವಯಂಸೇವಕರನ್ನು ಒಳಗೊಂಡಿದೆ.