ಕೊಲ್ಲಮ್(ಕೇರಳ): ಜಗತ್ತನ್ನೇ ಬೆಚ್ಚಿ ಬೀಳಿಸಿರುವ ರೋಗ ಅಂದ್ರೆ ಅದು ಕೊರೊನಾ ವೈರಸ್. ಕೊರೊನಾ ಅಂದ್ರೆ ಸಾಕು ಜನರ ಎದೆ ಒಮ್ಮೆ ನಡುಗುತ್ತೆ, ಆದ್ರೆ ಇಲ್ಲಿ ಇರುವಂತಹ ಕೊರೊನಾ ಮಾತ್ರ ವೈರಸ್ ಅಲ್ಲ, ಬದಲಾಗಿ ಕೊಲ್ಲಮ್ನ ಸ್ಥಳೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಓರ್ವ ಮಹಿಳೆ.
ಕೊರೊನಾ ಅಂದೊಡನೆ ಥಟ್ ಅಂತ ನೆನಪಾಗೋದು ವೈರಸ್ ಮಾತ್ರ, ಯಾಕಂದ್ರೆ ಈ ರೋಗ ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಹಾಗಂತ ಕೊರೊನಾ ಅಂದ್ರೆ ವೈರಸ್ ಮಾತ್ರ ಎಂದು ತಿಳಿದುಕೊಂಡರೆ, ನಿಮ್ಮ ಊಹೆ ಖಂಡಿತಾ ತಪ್ಪು, ಯಾಕಂದ್ರೆ ಕೇರಳದ ಕೊಲ್ಲಮ್ನ ಮಹಿಳೆಯೋರ್ವಳ ಹೆಸರು ಸಹ ಕೊರೊನಾ ಥಾಮಸ್. ಸದ್ಯ ಈ ಮಹಿಳೆ, ಬಿಜೆಪಿ ಪಕ್ಷದಿಂದಲೇ ಸ್ಥಳೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದು, ಕೊರೊನಾ ಎಂಬ ಹೆಸರಿನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಕೊರೊನಾ ಥಾಮಸ್, ನನ್ನ ತಂದೆ ತಾಯಿಗೆ ನಾವು ಇಬ್ಬರು ಅವಳಿ-ಜವಳಿ ಮಕ್ಕಳು, ನಮ್ಮ ತಂದೆ ನಮ್ಮಿಬ್ಬರಿಗೂ ವಿಶಿಷ್ಟವಾದ ಹೆಸರಿಡಲು ಪ್ರಯತ್ನಸಿದ್ದರಂತೆ, ಆದ ಕಾರಣ ನನ್ನ ಸಹೋದರನಿಗೆ ಕೋರಲ್ ಎಂದು ಹಾಗೂ ನನಗೆ ಕೊರೊನಾ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಕೊರೊನಾ ಎಂದರೆ ಸೂರ್ಯ ಅಥವಾ ಚಂದ್ರನ ಸುತ್ತಲೂ ಕಂಡುಬರುವ ಬೆಳಕು ಎಂದು ಕೊರೊನಾ ಥಾಮಸ್ ತಮ್ಮ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ.