ನವದೆಹಲಿ:ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ಕೊರೊನಾ ಹಾವಳಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಹಿಂದೆ ಕೋವಿಡ್ ನಿಯಂತ್ರಣಕ್ಕೆ ವಿಧಿಸಿದ್ದ ನಿಯಮಾವಳಿಗಳು/ಮಾರ್ಗಸೂಚಿಗಳು ಸಹ ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿವೆ. ಕೋವಿಡ್ ತೀವ್ರತೆ ತಗ್ಗಿದ ಪರಿಣಾಮ ವಿಧಿಸಲಾಗಿದ್ದ ಎಲ್ಲಾ ಕೊರೊನಾ ನಿರ್ಬಂಧಗಳನ್ನು ಮಾರ್ಚ್ 31 ರಿಂದ ತೆರವು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮಾತ್ರ ಕಡ್ಡಾಯವಿರಲಿದೆ.
ಈ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಮಾತನಾಡಿ, ದೇಶದಲ್ಲಿ ಕೊರೊನಾ ತೀವ್ರತೆ ಕಡಿಮೆಯಾಗಿದೆ. ಲಸಿಕೆ ನೀಡಿಕೆ ಬಳಿಕ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಎಲ್ಲ ಕೊರೊನಾ ನಿಯಮಗಳನ್ನು ಮಾರ್ಚ್ 31 ರಿಂದ ತೆರವು ಮಾಡಲು ಸರ್ಕಾರ ಮುಂದಾಗಿದೆ. ಆದಾಗ್ಯೂ ಜನರು ಮಾಸ್ಕ್ ಧರಿಸುವುದನ್ನು ಬಿಡುವಂತಿಲ್ಲ ಎಂದು ಹೇಳಿದ್ದಾರೆ. ಕೋವಿಡ್-ಸುರಕ್ಷತಾ ಕ್ರಮಗಳಿಗಾಗಿ ಇದ್ದ ವಿಪತ್ತು ನಿರ್ವಹಣಾ ಕಾಯ್ದೆಯು ಇನ್ಮುಂದೆ ಅನ್ವಯಿಸುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.