ಮುಂಬೈ(ಮಹಾರಾಷ್ಟ್ರ):ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ನ ಮೂರನೇ ಅಲೆ ಜೋರಾಗಿದ್ದು, ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಇದರ ಆರ್ಭಟ ಪ್ರತಿದಿನ ವೇಗ ಪಡೆದುಕೊಳ್ಳುತ್ತಿದೆ. ದಿನನಿತ್ಯ ಸಾವಿರಾರು ಹೊಸ ಹೊಸ ಪ್ರಕರಣ ದಾಖಲಾಗುತ್ತಿವೆ. ಈ ಮಧ್ಯೆ ಮುಂಬೈನಲ್ಲಿ ಸರ್ಕಾರಿ ಕೋವಿಡ್ ಕೇಂದ್ರಗಳಲ್ಲಿ ಶೇ. 80ರಷ್ಟು ಹಾಸಿಗೆ ಖಾಲಿ ಇದ್ದರೂ, ಸೋಂಕಿತರು ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಿದ್ದಾರೆ.
ಮುಂಬೈನಲ್ಲಿ ಪ್ರತಿದಿನ 20 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ದಾಖಲಾಗುತ್ತಿರುವ ಕಾರಣ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಕೋವಿಡ್ ಎದುರಿಸಲು ಸಜ್ಜಾಗಿದೆ. ಅದಕ್ಕಾಗಿ ಪ್ರಮುಖ 9 ಸ್ಥಳಗಳಲ್ಲಿ ಜಂಬೋ ಕೋವಿಡ್ ಕೇಂದ್ರ ಸ್ಥಾಪನೆ ಮಾಡಿದೆ. ಆದರೆ, ಮುಂಬೈನ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರು ಹೆಚ್ಚಾಗಿ ದಾಖಲಾಗುತ್ತಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಸೋಂಕಿಗೆ ತುತ್ತಾದವರಲ್ಲಿ ಶೇ. 30ರಷ್ಟು ಜನರು ಶ್ರೀಮಂತರಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ಬದಲಾಗಿ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಗಳು ಶೇ. 80ರಷ್ಟು ಬೆಡ್ ಕೊರೊನಾ ಸೋಂಕಿತರಿಗೆ ಮೀಸಲು ಇಡುವಂತೆ ಸೂಚನೆ ನೀಡಲಾಗಿದ್ದು, ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸದಂತೆ ಪಾಲಿಕೆ ಸೂಚನೆ ನೀಡಿದೆ.