ಪಟಿಯಾಲ(ಪಂಜಾಬ್): ಪಟಿಯಾಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ಸುಮಾರು 100 ವಿದ್ಯಾರ್ಥಿಗಳಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.
ಹಾಗಾಗಿ, ಇನ್ನೂ ಅನೇಕರು ಸೋಂಕಿಗೆ ಒಳಗಾಗಬಹುದು ಎಂಬ ಭಯದಿಂದ ಹಾಸ್ಟೆಲ್‌ಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಮಕ್ಕಳನ್ನು ಹಾಸ್ಟೆಲ್‌ನಿಂದ ಸ್ಥಳಾಂತರಿಸಲಾಗಿದೆ.
ಸ್ಥಳೀಯ ಆಡಳಿತ ಮತ್ತು ಕಾಲೇಜು ಆಡಳಿತ ಮಂಡಳಿ ತುರ್ತು ಸಭೆಯನ್ನು ಕರೆದು ಸಂಸ್ಥೆಯಲ್ಲಿ ಸೋಂಕನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರ್ಧರಿಸಿತು.
ಕೋವಿಡ್, ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ವೈದ್ಯರು ಹೆಚ್ಚಿನ ಅಪಾಯದಲ್ಲಿದ್ದಾರೆ. ಕಳೆದ ಶನಿವಾರದಿಂದ 159 ವೈದ್ಯರಿಗೆ ಕೋವಿಡ್ ಅಂಟಿದೆ.
ಆ ಪೈಕಿ ಹಲವರು ಡಿಸೆಂಬರ್ 27 ಮತ್ತು 28ರಂದು ಪಾಟ್ನಾದಲ್ಲಿ ನಡೆದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಎರಡು ದಿನಗಳ 96ನೇ ರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿದ ಹಿನ್ನೆಲೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ತುರ್ತು ಸಭೆ ನಡೆಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ರಾಜ್ ಕುಮಾರ್ ವರ್ಕಾ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.
ಕೋವಿಡ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆ, ಎಲ್ಲ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಜೊತೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಎಲ್ಲ ಕಚೇರಿಗಳಲ್ಲಿ ಕೋವಿಡ್ ಕಟ್ಟುನಿಟ್ಟಿನ ಮಾರ್ಗಚೂಚಿ ಪಾಲಿಸಲಾಗುತ್ತಿದೆ.
ಇದನ್ನೂ ಓದಿ:India Corona: 37 ಸಾವಿರ ಹೊಸ ಕೋವಿಡ್ ಕೇಸ್ಗಳು ಪತ್ತೆ
ದೇಶದಲ್ಲಿ ಮತ್ತೆ ಕೋವಿಡ್, ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ 24 ಗಂಟೆಯಲ್ಲಿ 37,379 ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,48,08,886ಕ್ಕೆ ಏರಿದೆ.
ಈವರೆಗೆ ದೇಶದಲ್ಲಿ1,892 ಮಂದಿ ಒಮಿಕ್ರಾನ್ ಸೋಂಕಿತರು ಕಾಣಿಸಿಕೊಂಡಿದ್ದು, 766 ಮಂದಿ ಈಗಾಗಲೇ ಚೇತರಿಕೆ ಕಂಡಿದ್ದಾರೆ.