ಸತಾರಾ(ಮಹಾರಾಷ್ಟ್ರ):ವಿಶ್ವವನ್ನೇ ಕಾಡಿದ್ದ ಕೊರೊನಾ ದೇಶದಲ್ಲಿ ಮತ್ತೆ ಸಣ್ಣದಾಗಿ ವ್ಯಾಪಿಸುತ್ತಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ತಲಾ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ 24 ಗಂಟೆ ಅವಧಿಯಲ್ಲಿ 3641 ಹೊಸ ಕೇಸ್ಗಳು ದಾಖಲಾಗಿವೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 45ಕ್ಕೆ ತಲುಪಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಇನ್‌ಫ್ಲುಯೆಂಜಾ ಕಾಯಿಲೆ ಮತ್ತು ಕೋವಿಡ್ ಹೆಚ್ಚಾಗುತ್ತಿದ್ದು, ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಜನಸಂದಣಿ ಇರುವ ಸ್ಥಳಗಳಲ್ಲಿ ಸ್ವಯಂಪ್ರೇರಿತವಾಗಿ ಮಾಸ್ಕ್ ಬಳಸುವಂತೆ ಅಲ್ಲಿನ ಜಿಲ್ಲಾಧಿಕಾರಿ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಇನ್‌ಫ್ಲುಯೆಂಜಾ ಮತ್ತು ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲಾಧಿಕಾರಿಗಳು ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಬಳಕೆಯನ್ನು ಕಡ್ಡಾಯ ಮಾಡಿ ಆದೇಶಿಸಿದ್ದಾರೆ. ಮಾರುಕಟ್ಟೆಗಳು, ಕೂಟಗಳು, ಮದುವೆ ಸಮಾರಂಭಗಳು ಮತ್ತು ಜನ ಸೇರುವ ಸಭೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಮಾಸ್ಕ್ ಬಳಸಬೇಕು. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಗಿದೆ.
ಪ್ರಸ್ತುತ ಯಾವುದೇ ಕೊರೊನಾ ಸೋಂಕಿತರ ಸ್ಥಿತಿ ಗಂಭೀರವಾಗಿಲ್ಲ. ಮನೆಯಲ್ಲಿ ಐಸೋಲೇಶನ್‌ನಲ್ಲಿರುವ ಜನರು ಮುಕ್ತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹನ್ನೆರಡು ಜನರಿಂದ ಸ್ವ್ಯಾಬ್ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.