ಅಮರಾವತಿ(ಆಂಧ್ರಪ್ರದೇಶ): ನವೆಂಬರ್ 2 ತಾರಿಕಿನಿಂದ 9 ಮತ್ತು 10ನೇ ತರಗತಿಯನ್ನು ಆಂಧ್ರಪ್ರದೇಶದಲ್ಲಿ ಪುನಾರಂಭಿಸಲಾಗಿದೆ. ಶಾಲೆ ಆರಂಭವಾಗಿ ನಾಲ್ಕು ದಿನಗಳಾಗಿವೆ. ಆದ್ರೆ ಶಾಲಾ ಶಿಕ್ಷಕರು ಮತ್ತು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಪೋಷಕರು ಮತ್ತು ಸರ್ಕಾರದ ನಿದ್ದೆಗೆಡಿಸಿದೆ.
ಶಾಲೆಗಳು ಪುನಾರಂಭವಾದ ನಾಲ್ಕೇ ದಿನಕ್ಕೆ 575 ಮಕ್ಕಳಿಗೆ, 829 ಶಿಕ್ಷಕರಿಗೆ ಕೊರೊನಾ ದೃಢ! - ಆಂಧ್ರಪ್ರದೇಶ ಶಾಲೆ ಆರಂಭ ಸುದ್ದಿ
ನವೆಂಬರ್ 2 ರಿಂದ ಶಾಲೆಗಳನ್ನು ಪುನಾರಂಭಿಸಿದ್ದ ಆಂಧ್ರಪ್ರದೇಶ ಸರ್ಕಾರಕ್ಕೆ ಆಘಾತ ಉಂಟಾಗಿದೆ. ಶಾಲೆಗಳ ಆರಂಭವಾದ ನಾಲ್ಕು ದಿನಗಳಲ್ಲೇ 575 ಮಕ್ಕಳಿಗೆ ಹಾಗೂ 829 ಶಿಕ್ಷಕರಿಗೆ ಕೊರೊನಾ ಸೋಂಕು ತಗಲಿರುವ ವರದಿ ಸರ್ಕಾರದ ನಿದ್ದೆಗೆಡಿಸಿದೆ.
ಹೌದು, ಕಳೆದ ನಾಲ್ಕು ದಿನಗಳಲ್ಲಿ ಆಂಧ್ರಪ್ರದೇಶ ಶಾಲೆಗಳಲ್ಲಿ ಕೊರೊನಾ ವಿಜೃಂಭಿಸುತ್ತಿದೆ. ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಇಲ್ಲಿಯವರೆಗೆ 70,790 ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 829 ಶಿಕ್ಷಕರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. 95,753 ವಿಧ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 575 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ತಿಳಿದು ಬಂದಿದೆ.
ಆಂಧ್ರಪ್ರದೇಶದಲ್ಲಿ ನವೆಂಬರ್ 2ನೇ ರಿಂದ 9 ಮತ್ತು 10ನೇ ತರಗತಿಯ ತರಗತಿಗಳನ್ನು ಪುನಾರಂಭಿಸಲಾಗಿದೆ. ಪೋಷಕರ ಒಪ್ಪಿಗೆ ಮೇರೆಗೆ ಮಕ್ಕಳು ಶಾಲೆಗೆ ಬರಬಹುದೆಂಬ ಆದೇಶವನ್ನು ಸರ್ಕಾರ ಜಾರಿ ಮಾಡಿತ್ತು. ಈ ಹಿನ್ನೆಲೆ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಆದ್ರೆ ಶಿಕ್ಷಕರು, ವಿದ್ಯಾರ್ಥಿಗಳು ಬೇರೆ-ಬೇರೆ ಪ್ರದೇಶಗಳಿಂದ ಶಾಲೆಗೆ ಬಂದು ಹೋಗುತ್ತಿದ್ದಾರೆ. ಈ ವೇಳೆ ಅವರು ತಮ್ಮ ಸ್ನೇಹಿರೊಂದಿಗೆ ಬೆರೆಯುವುದು, ಮಾತನಾಡುವುದು, ಮಾಸ್ಕ್ ವಿಷಯದಲ್ಲಿ ಕಾಳಜಿ ವಹಿಸದಿರುವುದು ಸೇರಿದಂತೆ ಇನ್ನಿತರ ವಿಷಯದಲ್ಲಿ ಜಾಗೃತರಾಗಿಲ್ಲದ್ದರಿಂದ ಇವರಿಗೆ ಕೊರೊನಾ ಸೋಂಕು ಹಬ್ಬುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.