ಕರ್ನಾಟಕ

karnataka

ETV Bharat / bharat

ವ್ಯಾಕ್ಸಿನೇಷನ್ ನಂತರವೂ ಕೊರೊನಾ ಸೋಂಕು.. ಏಕೆ, ಹೇಗೆ? ಕಾರಣ ಇಲ್ಲಿದೆ - someone-even-after-taking-vaccination

ಲಸಿಕೆ ಪಡೆದರೂ ಕೊರೊನಾ ಬರುತ್ತದೆಯೇ? ಎಂಬ ಭಯ ಅನೇಕರಲ್ಲಿದೆ. ವ್ಯಾಕ್ಸಿನ್​ ಪಡೆದವರಿಗೆ ಸೋಂಕು ಬರುವುದಿಲ್ಲ ಎಂದು ಹೇಳಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವೈರಸ್‌ನ ಸಂಪೂರ್ಣ ನಿರ್ಮೂಲನೆಗೆ ಮಾತ್ರವಲ್ಲದೇ, ಆಸ್ಪತ್ರೆಗೆ ದಾಖಲಾಗುವುದು, ಪ್ರಾಣಹಾನಿ ಮತ್ತು ಆರ್ಥಿಕ ಹೊರೆಯ ಬಗ್ಗೆಯೂ ಗಮನಹರಿಸುವುದು ಮುಖ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ವಿಭಾಗದ ಮುಖ್ಯಸ್ಥ ಮೈಕ್ ರಯಾನ್ ಹೇಳಿದ್ದಾರೆ.

ಕೊರೊನಾ
ಕೊರೊನಾ

By

Published : Jun 23, 2021, 5:29 PM IST

ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್‌ ಯಾವಾಗ ಅಂತ್ಯ ಕಾಣಲಿದೆ ಎಂಬುದು ತಜ್ಞರಿಗೇ ತಿಳಿದಿಲ್ಲ. ವ್ಯಾಕ್ಸಿನೇಷನ್ ಮೂಲಕ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಶ್ವದ ರಾಷ್ಟ್ರಗಳು ಶ್ರಮಿಸುತ್ತಿವೆ. ಈ ನಡುವೆ ಹೊಸ ರೀತಿಯ ಕೊರೊನಾ ವೈರಸ್​ಗಳು ಹೊರಹೊಮ್ಮುತ್ತಿರುವುದರಿಂದ ಹರ್ಡ್ ಇಮ್ಯುನಿಟಿ (ಗುಂಪಿನ ಪ್ರತಿರಕ್ಷೆ) ಸಾಧಿಸುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ವೈರಸ್ ನಮ್ಮೊಂದಿಗೆ ಶಾಶ್ವತವಾಗಿ ಇರಲಿದೆ. ಆದರೆ ಅದರ ತೀವ್ರತೆಯು ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಕೋವಿಡ್ ನಿರ್ಮೂಲನೆ ಸಾಧ್ಯವೇ?

ಕೋವಿಡ್ ನಿರ್ಮೂಲನೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವು ತಜ್ಞರಿಂದ 'ಇಲ್ಲ' ಎಂದೇ ಬರುತ್ತಿದೆ. ಇಲ್ಲಿಯವರೆಗೆ ಸಿಡುಬು ಕಾಯಿಲೆಯನ್ನು ಮಾತ್ರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಕೊರೊನಾ ವೈರಸ್‌ಗೆ ಕಾರಣವಾಗುವ SARS-Cov-2 ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಕಟ್ಟುನಿಟ್ಟಾದ ಲಾಕ್‌ಡೌನ್‌ಗಳು ಮತ್ತು ಗಡಿ ಮುಚ್ಚುವಿಕೆಯೊಂದಿಗೆ ನ್ಯೂಜಿಲೆಂಡ್‌ನಂತಹ ದೇಶಗಳು ಕೊರೊನಾವನ್ನು ಶೂನ್ಯಕ್ಕೆ ತಂದರೂ ಸಹ, ಇದು ಎಲ್ಲಾ ದೇಶಗಳಿಗೆ ಸಾಧ್ಯವಿಲ್ಲ. ವಿಶೇಷವಾಗಿ ಬಡ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಇದು ಸವಾಲಾಗಿ ಪರಿಣಮಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಲಸಿಕೆಗಳಿಂದ ವೈರಸ್ ಅನ್ನು ಎಲ್ಲಿಯವರೆಗೆ ಕಟ್ಟಿಹಾಕಬಹುದು?

ಪ್ರಸ್ತುತ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅವು ಎಷ್ಟು ಕಾಲ ಉಳಿಯುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈರಸ್ ವಿರುದ್ಧ ದೀರ್ಘಕಾಲೀನ ರಕ್ಷಣೆ ನೀಡಲು ಸಾಧ್ಯವಾದರೆ 60 ರಿಂದ 72 ಪ್ರತಿಶತದಷ್ಟು ಜನರಿಗೆ ಹರ್ಡ್​ ಇಮ್ಯುನಿಟಿ ಸಾಧಿಸಲು ಲಸಿಕೆ ಹಾಕುವ ಅಗತ್ಯವಿದೆ ಎಂದು ಲ್ಯಾನ್ಸೆಟ್ ತಜ್ಞರು ಈಗಾಗಲೇ ಅಂದಾಜಿಸಿದ್ದಾರೆ. ಅಂತಹ ಲಸಿಕೆಗಳ ಸಾಮರ್ಥ್ಯ, ಅವು ಒದಗಿಸುವ ರಕ್ಷಣೆ ಎಲ್ಲಿಯವರೆಗೆ ಇರಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಹೊಸ ರೂಪಾಂತರಗಳು ಎಷ್ಟು ಪರಿಣಾಮಕಾರಿ?

ಕೊರೊನಾ ವೈರಸ್ ಹರಡುವಿಕೆಯು ಹೆಚ್ಚಾದಂತೆ ರೂಪಾಂತರವೂ ಹೆಚ್ಚಾಗುತ್ತದೆ. ಬ್ರಿಟನ್, ದಕ್ಷಿಣ ಅಮೆರಿಕಾ, ಬ್ರೆಜಿಲ್ ಮತ್ತು ಭಾರತದಲ್ಲಿ ಹೊರಹೊಮ್ಮಿದ ಹೊಸ ರೂಪಾಂತರಗಳು ವೈರಸ್ ಹರಡುವಿಕೆಯನ್ನು ವೇಗಗೊಳಿಸುವುದರೊಂದಿಗೆ ಲಸಿಕೆಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ. ಆದ್ದರಿಂದ ಹೊಸ ರೂಪಾಂತರಗಳಿಗೆ ಹೊಂದಿಕೊಳ್ಳಲು ಕಾಲಕಾಲಕ್ಕೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಇದರೊಂದಿಗೆ, ಆಯಾ ಲಸಿಕೆಯ ಕಂಪನಿಗಳು ಈಗಾಗಲೇ ಬೂಸ್ಟರ್ ಪ್ರಮಾಣವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿವೆ.

ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಲಸಿಕೆಗಳ ಪಾತ್ರ

ಲಸಿಕೆ ಪಡೆಯುವುದರಿಂದ ಇತರರಿಗೆ ಸೋಂಕು ಹರಡಲಿದೆಯೇ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಲಸಿಕೆ ಪಡೆದ ಜನರಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಲಸಿಕೆ ಹಾಕಿದ ನಂತರವೂ, ಸೋಂಕಿತ ವ್ಯಕ್ತಿಯು ಕೆಮ್ಮು ಅಥವಾ ಸೀನುವಾಗ ಇತರರಿಗೆ ವೈರಸ್ ಹರಡುವ ಅಪಾಯವಿದೆ. ಆದ್ದರಿಂದ ವೈರಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವತ್ತ ಗಮನ ಹರಿಸುವ ಬದಲು, ಆಸ್ಪತ್ರೆಗೆ ದಾಖಲು, ಸಾವು-ನೋವು ಮತ್ತು ಆರ್ಥಿಕ ಹೊರೆ ಕಡಿಮೆ ಮಾಡುವುದು ಬಹಳ ಮುಖ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ವಿಭಾಗದ ಮುಖ್ಯಸ್ಥ ಮೈಕ್ ರಯಾನ್ ಹೇಳಿದ್ದಾರೆ.

ಸಂಪೂರ್ಣವಾಗಿ ನಿಯಂತ್ರಿಸದಿದ್ದರೆ ..?

ಕೋವಿಡ್ -19 ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದರೆ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಇನ್ನೊಂದು ಪ್ರಶ್ನೆ. ಆದರೆ ಜನಸಮೂಹಕ್ಕೆ ವೈರಸ್​ಗಳು​ ಹರಡುತ್ತಾ ಹೋದರೆ ಕೆಲ ಕಾಲದ ನಂತರ ಅವುಗಳ ಪ್ರಭಾವ ಕಡಿಮೆಯಾಗಿ ಸ್ಥಾನಿಕವಾಗಿ (ಎಂಡಮಿಕ್) ಹರಡುವ​ ಅವಕಾಶವಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಸುಮಾರು 100 ಮಂದಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಮೇಲೆ ನೇಚರ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ, 90 ಪ್ರತಿಶತ ಜನರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾಧಾರಣವಾಗಿ ನೆಗಡಿಯವಂತವು ಈ ವರ್ಗಕ್ಕೆ ಬರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದಲ್ಲಿ ಯಾವೆಲ್ಲಾ ಪರಿಣಾಮಗಳು?

ವೈರಸ್‌ನಿಂದ ಚೇತರಿಸಿಕೊಂಡವರಿಗೆ ಹಾಗೂ ಲಸಿಕೆ ಹಾಕಿಸಿಕೊಂಡವರಿಗೆ ಕೊರೊನಾದಿಂದ ಕೆಲವು ದಿನಗಳ ರಕ್ಷಣೆ ಇರುತ್ತದೆ. ಇನ್ನು ಎರಡನೇ ಬಾರಿಗೆ ಸೋಂಕು ಬಂದವರಿಗೆ ಆ್ಯಂಟಿಬಾಡೀಸ್​ ಹೆಚ್ಚಾಗಿ ಇರುತ್ತವೆ. ಕೇವಲ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು, ವ್ಯಾಕ್ಸಿನ್​ ಪಡೆಯದವರೇ ವೈರಸ್​​ಗೆ ತುತ್ತಾಗುತ್ತಿದ್ದಾರೆ. ಕೊರೊನಾ ವಿರುದ್ಧ ಹೆರ್ಡ್​ ಇಮ್ಯುನಿಟಿ ಸಾಧಿಸುವವರೆಗೂ ಅಥವಾ ಎಂಡಮಿಕ್​ ಸ್ಥಾಯಿ ಬರುವವರೆಗೂ ಇಂತಹ ಆಘಾತಗಳು ತಪ್ಪಿದ್ದಲ್ಲ. ಆ ಬಳಿಕ ಸಮಯ ಕಳೆಯುತ್ತಿದ್ದಂತೆ ಕೊರೊನಾ ಸಾಧಾರಣ ನೆಗಡಿಯಂತೆ ಆಗುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details