ನವದೆಹಲಿ:ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 2 ಡೋಸ್ ಕೊವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಅಲ್ಲದೇ ಬೂಸ್ಟರ್ ಡೋಸ್ ಅನ್ನೂ ಉಚಿತವಾಗಿ ನೀಡುತ್ತಿದೆ. ಅದರ ಜೊತೆಗೆ ಇದೀಗ 18 ವರ್ಷ ಮೇಲ್ಪಟ್ಟವರಿಗೆ ಬಯೋಲಾಜಿಕಲ್ ಇ ಕಾರ್ಬೆವಾಕ್ಸ್ ಲಸಿಕೆಯನ್ನು ಮುನ್ನೆಚ್ಚರಿಕಾ ಡೋಸ್ ಆಗಿ ತೆಗೆದುಕೊಳ್ಳಲು ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
ಏಕವ್ಯಕ್ತಿ ಎರಡು ಮಾದರಿಯ ಲಸಿಕೆಯನ್ನು ಪಡೆಯಲು ಅನುಮತಿಸಿರುವುದು ಇದೇ ಮೊದಲಾಗಿದೆ. ಅದರಲ್ಲೂ ಬೂಸ್ಟರ್ ಡೋಸ್ಗೆ ಅನುಮತಿಸಿರುವುದು ವಿಶೇಷವಾಗಿದೆ. ಇಮ್ಯುನೈಸೇಶನ್ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಇದನ್ನು ಅನುಮೋದಿಸಿದೆ ಎಂದು ಗೊತ್ತಾಗಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರು ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಪಡೆದ 6 ತಿಂಗಳು ಅಥವಾ 26 ವಾರಗಳ ನಂತರ ಕಾರ್ಬೆವಾಕ್ಸ್ ಅನ್ನು ಮುನ್ನೆಚ್ಚರಿಕೆ ಡೋಸ್ ಆಗಿ ಹಾಕಿಸಿಕೊಳ್ಳಬಹುದು. ಕಾರ್ಬೆವಾಕ್ಸ್ ವೈವಿಧ್ಯಮಯ ಕೋವಿಡ್ ಲಸಿಕೆಯಾಗಿರುವುದರಿಂದ ಈ ವಯೋಮಾನದವರಲ್ಲಿ ಹೆಚ್ಚಿನ ರೋಗ ನಿರೋಧಕತೆ ಉತ್ಪಾದಿಸಲು ಈ ಬೂಸ್ಟರ್ ಡೋಸ್ ನೆರವಾಗಲಿದೆ ಎಂದು ಹೇಳಲಾಗಿದೆ.