ನವದೆಹಲಿ:ರಕ್ಷಾಬಂಧನ್ ಹಬ್ಬದ ಸಂದರ್ಭದಲ್ಲಿಕೇಂದ್ರ ಸರ್ಕಾರ ಜನರಿಗೆ ಸಿಹಿ ಸುದ್ದಿ ನೀಡಿದೆ. ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಇಳಿಕೆ ಮಾಡಲು ಎಂದು ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ವಿಷಯವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಓಣಂ ಮತ್ತು ರಕ್ಷಾಬಂಧನ್ ಸಂದರ್ಭದಲ್ಲಿ ಲಕ್ಷಾಂತರ ಸಹೋದರಿಯರು ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆದಾರರಿಗೆ ಪ್ರಧಾನಿ ಮೋದಿ ಉಡುಗೊರೆ ನೀಡಿದ್ದಾರೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಲು ಪ್ರಧಾನಿ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ, ಉಜ್ವಲ ಯೋಜನೆಯಡಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಉಚಿತವಾಗಿ ನೀಡಲಾಗುತ್ತದೆ. ಉಜ್ವಲ ಫಲಾನುಭವಿಗಳಿಗೆ ಸಬ್ಸಿಡಿ ಈಗ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 400 ರೂ. ಆಗಿದೆ. ಈಗಾಗಲೇ ಉಜ್ವಲ ಫಲಾನುಭವಿಗಳು ಪ್ರತಿ ಸಿಲಿಂಡರ್‌ಗೆ 200 ಸಬ್ಸಿಡಿ ರೂ. ಸಬ್ಸಿಡಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ನವದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1,103 ರೂ. ಇದೆ. ಬುಧವಾರದಿಂದ ಈ ಸಿಲಿಂಡರ್ ಬೆಲೆ 903 ರೂ. ಆಗಲಿದೆ. ಉಜ್ವಲ ಫಲಾನುಭವಿಗಳಿಗೆ 703 ರೂ.ಗೆ ಪ್ರತಿ ಸಿಲಿಂಡರ್ ಸಿಗಲಿದೆ. ಅಲ್ಲದೇ, ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 75 ಲಕ್ಷ ಉಜ್ವಲ ಸಂಪರ್ಕಗಳನ್ನು ಒದಗಿಸಲು ಮುಂದಾಗಿದೆ. ಇದರಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳ ಸಂಖ್ಯೆ 10.35 ಕೋಟಿಗೆ ಹೆಚ್ಚಳವಾಗಲಿದೆ.