ಪುಣೆ (ಮಹಾರಾಷ್ಟ್ರ):ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕೋಪರ್ಡಿಯಲ್ಲಿ ನಡೆದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಅಪರಾಧಿ ಯರವಾಡ ಜೈಲಿನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಮುಖ ಅಪರಾಧಿಯಾಗಿದ್ದ ಜಿತೇಂದ್ರ ಶಿಂಧೆ ಸಾವಿಗೆ ಶರಣಾದ ವ್ಯಕ್ತಿ.
ಘಟನೆಯ ವಿವರ: ಜುಲೈ 13, 2016ರಂದು ಅಹ್ಮದ್‌ನಗರದ ಕೋಪರ್ಡಿ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯಿಂದ ಮಹಾರಾಷ್ಟ್ರ ಬೆಚ್ಚಿ ಬಿದ್ದಿತ್ತು. ಅಪರಾಧಿಗಳ ವಿರುದ್ಧ ಮಹಾರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಪ್ರತಿಭಟನಾ ಮೆರವಣಿಗೆಗಳು ನಡೆದಿದ್ದವು. ಜಿತೇಂದ್ರ ಶಿಂಧೆ ಎಂಬಾತ ಈ ಪ್ರಕರಣದ ಪ್ರಮುಖ ಅಪರಾಧಿಯಾಗಿದ್ದು, ಪುಣೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಈತ ಭಾನುವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಶಿಂಧೆ ಮಾನಸಿಕ ಅಸ್ವಸ್ಥನಾಗಿದ್ದ. ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.