ಮಧ್ಯಪ್ರದೇಶ: ಧಾರ್ಮಿಕ ಪ್ರವಾಸೋದ್ಯಮ (Religious Tourism)ವನ್ನು ಉತ್ತೇಜಿಸಲು ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (IRCTC) ಆರಂಭಿಸಿರುವ ‘ರಾಮಾಯಣ ಯಾತ್ರಾ’ ಸರಣಿಯ (Ramayana Circuit Train) ರೈಲಿನಲ್ಲಿ ಕೇಸರಿ ವಸ್ತ್ರದ ವಿವಾದವೆದ್ದಿದೆ.
ಈ ರೈಲಿನಲ್ಲಿ ಕೆಲಸ ಮಾಡುವ ವೇಟರ್‌ಗಳು ಸಂತರಂತೆ ಕೇಸರಿ ವಸ್ತ್ರಗಳನ್ನು(saffron uniforms of waiters) ಧರಿಸಿ ಬರುವ ಭಕ್ತರಿಗೆ ಊಟ ಬಡಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಉಜ್ಜಯಿನಿಯ ಸಂತರು ಖಂಡಿಸಿದ್ದು, ಈ ಬಗ್ಗೆ ರೈಲ್ವೆ ಸಚಿವರಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಮಹಂಸ ಅಖಾರ ಪರಿಷತ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಅವಧೇಶ್ ಪುರಿ ಮಾತನಾಡಿ, 'ಸಂತರ ವೇಷಭೂಷಣಗಳನ್ನು ಮಾಣಿಗಳು ಧರಿಸಿದ್ದಾರೆ. ಇದು ಸಾಧು ಸಮಾಜಕ್ಕೆ ಮಾಡಿದ ಅವಮಾನ. ಶೀಘ್ರದಲ್ಲೇ ಅವರು ಧರಿಸಿರುವ ವೇಷಭೂಷಣವನ್ನು ಬದಲಾಯಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 12 ರಂದು ರೈಲು ಸಂಚಾರವನ್ನು ವಿರೋಧಿಸಲಾಗುತ್ತದೆ. ರೈಲಿನ ಮುಂದೆ ಸಾವಿರಾರು ಹಿಂದೂಗಳು ಪ್ರತಿಭಟನೆ ನಡೆಸಲಿದ್ದಾರೆ. ವಿಡಿಯೋ ಹೊರಬಿದ್ದ ನಂತರ ನಾನು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದೇನೆ' ಎಂದಿದ್ದಾರೆ.
ಸುದೀರ್ಘ ಪ್ರಯಾಣದ ಈ ಯಾತ್ರಾ ಸರಣಿಯಲ್ಲಿ ಪ್ರವಾಸಿಗರನ್ನು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆ ಒಳಗೊಂಡಂತೆ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಾದ ಉಜ್ಜಯಿನಿ, ಅಯೋಧ್ಯೆ, ಚಿತ್ರಕೂಟ ಮೊದಲಾದ ಸ್ಥಳಗಳಿಗೆ ಕರೆದೊಯ್ಯಲು ಆರಂಭಿಸಲಾಗಿದೆ.