ಪುಣೆ (ಮಹಾರಾಷ್ಟ್ರ): ನವರಾತ್ರಿ ಹಬ್ಬದ ನಿಮಿತ್ತ 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪೂಜೆಗಳು ಆಯೋಜಿಸುವ ಸಾಮಾನ್ಯ. ಆದರೆ, ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿಯಾದ ಪುಣೆಯಲ್ಲಿ ನವರಾತ್ರಿ ಸಂದರ್ಭದಲ್ಲೇ ಮೂರು ದಿನಗಳ ಸೆಕ್ಸ್ ತಂತ್ರ ಶಿಬಿರ ಆಯೋಜಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಈ ಶಿಬಿರದ ಆಯೋಜಕರ ವಿರುದ್ಧ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸತ್ಯಂ ಶಿವಂ ಸುಂದರಂ ಪ್ರತಿಷ್ಠಾನವು ಅಕ್ಟೋಬರ್ 1ರಿಂದ 3ರವರೆಗೆ ಸೆಕ್ಸ್ ತಂತ್ರ ಎಂಬ ಶಿಬಿರವನ್ನು ಆಯೋಜಿಸಿದೆ. ಇದಕ್ಕೆ ಆನ್‌ಲೈನ್ ಬುಕ್ಕಿಂಗ್ ಇದ್ದು, ಈ ಕುರಿತ ಜಾಹೀರಾತು ಪೋಸ್ಟರ್ ವೈರಲ್ ಆಗಿದೆ. ಮೂರು ದಿನ ಹಾಗೂ ಎರಡು ರಾತ್ರಿ ನಡೆಯುವ ಶಿಬಿರಕ್ಕೆ ಪ್ರತಿ ವ್ಯಕ್ತಿಗೂ ವಸತಿ ಮತ್ತು ಊಟದೊಂದಿಗೆ 15 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಈ ಶಿಬಿರದಲ್ಲಿ ಕಾಮಸೂತ್ರದಲ್ಲಿನ ಧ್ಯಾನ ಮತ್ತು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.