ತಿರುನೆಲ್ವೇಲಿ:2002ರ ಗುಜರಾತ್ ಗಲಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಬಿಬಿಸಿ ತಯಾರಿಸಿರುವ ಹಾಗೂ ಭಾರತದಲ್ಲಿ ನಿಷೇಧಿತವಾಗಿರುವ ಸಾಕ್ಷ್ಯಚಿತ್ರವನ್ನು ಮನೋನ್ಮಣಿಯನ್ ಸುಂದರನಾರ್ ವಿಶ್ವವಿದ್ಯಾಲಯದ ತರಗತಿಯೊಂದರಲ್ಲಿ ಜನವರಿ 25 ರಂದು ಹಾಗೂ ಜನವರಿ 30 ರಮದು ಕಾಲೇಜಿನ ಹಾಸ್ಟೆಲ್ ರೂಮ್ ಒಂದರಲ್ಲಿ ಪ್ರದರ್ಶಿಸಲಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ವಿಶ್ವವಿದ್ಯಾನಿಲಯದ ಉಪಕುಲಪತಿ ಚಂದ್ರಶೇಖರ್ ಅವರಿಗೆ ದೂರು ನೀಡಿದೆ. ದೂರಿನ ಸತ್ಯಾಸತ್ಯತೆ ಹಾಗೂ ಘಟನೆಯ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ವ್ಯಕ್ತಿಗಳ ತನಿಖೆ ನಡೆಸುವಂತೆ ವಿಶ್ವವಿದ್ಯಾಲಯದ ಶಿಸ್ತು ಕ್ರಮ ಸಮಿತಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್ ಖಂಡನೆ: ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಗೆ ನಿರ್ಬಂಧ ಹೇರಿದ ಭಾರತ ಸರ್ಕಾರದ ಕ್ರಮವನ್ನು ವಾಷಿಂಗ್ಟನ್‌ನ ಪ್ರಮುಖ ಮಾಧ್ಯಮ ಸಂಸ್ಥೆಯಾದ ನ್ಯಾಷನಲ್ ಪ್ರೆಸ್ ಕ್ಲಬ್ (ಎನ್‌ಪಿಸಿ) ಬಲವಾಗಿ ಖಂಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಡ್ಡುತ್ತಿರುವ ದೊಡ್ಡ ಬೆದರಿಕೆಯ ಭಾಗವಾಗಿ ಸಾಕ್ಷ್ಯಚಿತ್ರವನ್ನು ಭಾರತ ಸರ್ಕಾರ ನಿಗ್ರಹಿಸಿರುವುದು ಕಂಡುಬರುತ್ತದೆ ಎಂದು ಮಂಗಳವಾರ ಬಿಡುಗಡೆಯಾದ ಎನ್‌ಪಿಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ. "ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವದಕ್ಕೆ ಹೆಮ್ಮೆಪಡಬೇಕು. ಆದರೆ ಪತ್ರಿಕಾ ಸ್ವಾತಂತ್ರ್ಯವನ್ನು ನಾಶಪಡಿಸುವುದು, ಪತ್ರಕರ್ತರನ್ನು ಹಿಂಸಿಸುವುದು ಮತ್ತು ಅದರ ನ್ಯೂನತೆಗಳಿಗೆ ಕನ್ನಡಿ ಹಿಡಿಯುವ ಸುದ್ದಿಗಳನ್ನು ಹತ್ತಿಕ್ಕುವುದನ್ನು ಮುಂದುವರಿಸಿದರೆ ಅದು ತನ್ನ ಗುರುತನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ" ಎಂದು ಎನ್‌ಪಿಸಿ ಅಧ್ಯಕ್ಷ ಐಲೀನ್ ಒ'ರೈಲಿ ಹೇಳಿದ್ದಾರೆ.