ನವದೆಹಲಿ:ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಈ ವೇಳೆ ನಿರ್ಮಲಾ ಸೀತಾರಾಮನ್ ಕೆಲವೊಂದು ಉತ್ಪನ್ನಗಳ ಮೇಲೆ ಕೃಷಿ ಸೆಸ್ ಹೇರಿಕೆ ಮಾಡಿ ಘೋಷಣೆ ಮಾಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ದೊಡ್ಡ ಮಟ್ಟದ ಹೊರೆಯಾಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇದೇ ವಿಷಯವಾಗಿ ಮಾತನಾಡಿರುವ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.
ಬಜೆಟ್ ಮಂಡನೆ ವೇಳೆ ಪೆಟ್ರೋಲ್ ಮೇಲೆ 2.5 ರೂ. ಡೀಸೆಲ್ ಮೇಲೆ 4ರೂ, ಮದ್ಯದ ಮೇಲೆ ಶೇ.100ರಷ್ಟು, ಬೆಳ್ಳಿ-ಬಂಗಾರದ ಮೇಲೆ ಶೇ.2.5ರಷ್ಟು ಸೆಸೆ ಏರಿಕೆ ಮಾಡಿ ಘೋಷಣೆ ಮಾಡಲಾಗಿತ್ತು. ಇದರಿಂದ ಜನಸಾಮಾನ್ಯರು ತೊಂದರೆಗೊಳಗಾಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು.
ಓದಿ: ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳೆಯರ ರಕ್ಷಣೆಗೆ 1,000 ಕೋಟಿ ರೂ. ಅನುದಾನ
ಇನ್ನು ಅನ್ಬ್ರಾಂಡೆಡ್ ಪೆಟ್ರೋಲ್ ಪ್ರತಿ ಲೀಟರ್ ಮೇಲೆ 2.98 ರೂ. ಮೂಲ ಅಬಕಾರಿ ಸುಂಕ ಮತ್ತು 12 ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇದೆ. ಅದನ್ನ ಕ್ರಮವಾಗಿ 1.4 ಹಾಗೂ 11 ರೂಗಳಿಗೆ ಇಳಿಕೆ ಮಾಡಲಾಗಿದೆ. ಇನ್ನು ಅನ್ಬ್ರಾಂಡ್ ಡೀಸೆಲ್ ಮೇಲೆ ಅಬಕಾರಿ ಸುಂಕ 4.83 ಇದ್ದು, ಇದರಲ್ಲಿ 1 ರೂ ಇಳಿಕೆ ಮಾಡಲಾಗಿದೆ. ಹೀಗಾಗಿ ಗ್ರಾಹಕರ ಮೇಲೆ ಯಾವುದೇ ರೀತಿಯ ಹೊರೆ ಆಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ. ಕ್ರಮವಾಗಿ ಪೆಟ್ರೋಲ್-ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿಮೆಯಾಗುತ್ತಿರುವ ಕಾರಣ ಅವುಗಳ ಮೇಲೆ ಸೆಸ್ ಏರಿಕೆ ಮಾಡಿದ್ರೂ ಯಾವುದೇ ರೀತಿಯ ಬದಲಾವಣೆ ಆಗಲ್ಲ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಪೆಟ್ರೋಲ್ - ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಹೇರಲಾಗಿದೆ. ಆದರೆ, ಇವುಗಳ ಮೇಲಿನ ಅಬಕಾರಿ ಸುಂಕ ಹಾಗೂ ಹೆಚ್ಚುವರಿ ಅಬಕಾರಿ ಸುಂಕ ಕಡಿಮೆ ಮಾಡಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ಬಜೆಟ್ ವೇಳೆ ಮಧ್ಯದ ಮೇಲೆ ಶೇ.100 , ಚಿನ್ನ ಮತ್ತು ಬೆಳ್ಳಿ ಮೇಲೆ ಶೇ.2.5, ಕಚ್ಚಾ ತಾಳೆ ಎಣ್ಣೆ ಮೇಲೆ ಶೇ.17.5, ಕಚ್ಚಾ ಸೋಯಾಬೀನ್, ಸೂರ್ಯಕಾಂತಿ ಎಣ್ಣೆಯ ಮೇಲೆ ಶೇ.20, ಸೇಬಿನ ಮೇಲೆ ಶೇ.35 ಮತ್ತು ಬಟಾಣಿ ಮೇಲೆ ಶೇ.40 ರಷ್ಟು ಕೃಷಿ ಸೆಸ್ ಹೆರಲಾಗಿದೆ. ಸೆಸ್ ಹೇರಿಕೆ ಮಾಡಿರುವುದರಿಂದ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದ್ದು, ಇದರಿಂದ ನೇರವಾಗಿ ಹಣ ಕೇಂದ್ರ ಸರ್ಕಾರದ ಖಾತೆಗೆ ಜಮಾವಣೆಗೊಳ್ಳಲಿದೆ.
ಮಧ್ಯದ ಮೇಲೂ ಇದೇ ಲೆಕ್ಕಾಚಾರ ಅನ್ವಯಗೊಳ್ಳಲಿರುವ ಕಾರಣ ಯಾವುದೇ ರೀತಿಯ ಏರಿಕೆ ಕಂಡು ಬರುವುದಿಲ್ಲ ಎಂದು ಅವರು ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ.