ಮುಂಬೈ (ಮಹಾರಾಷ್ಟ್ರ): ಮುಂಬೈನ ಉಬರ್ ಕಂಪನಿಯ ಟ್ಯಾಕ್ಸಿ ಚಾಲಕನೊಬ್ಬ ಮಹಿಳಾ ಪ್ರಯಾಣಿಕರನ್ನು ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಕರೆದೊಯ್ಯದ ಕಾರಣ ಮಹಿಳೆ ಚೆನ್ನೈಗೆ ತೆರಳುವ ವಿಮಾನವನ್ನು ತಪ್ಪಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಗ್ರಾಹಕ ನ್ಯಾಯಾಲಯ ಮಹಿಳೆಯ ಪರ ತೀರ್ಪು ನೀಡಿ ಉಬರ್‌ಗೆ ಛೀಮಾರಿ ಹಾಕಿದೆ. ಅಲ್ಲದೇ, 20,000 ದಂಡ ವಿಧಿಸಿದೆ.
ಮುಂಬೈನ ಟ್ರಾಫಿಕ್ ಜಾಮ್ನಲ್ಲಿ ವಾಹನ ಓಡಿಸುವುದು ದೊಡ್ಡ ಕಸರತ್ತೇ ಸರಿ. ಆದರೆ ಸಮಯಕ್ಕಿಂತ ಮುಂಚಿತವಾಗಿ ಟ್ಯಾಕ್ಸಿಯನ್ನು ಬುಕ್ ಮಾಡಿದರೂ, ಟ್ಯಾಕ್ಸಿ ಚಾಲಕ ನಿಗದಿತ ಸಮಯಕ್ಕೆ ಟ್ಯಾಕ್ಸಿಯನ್ನು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮುಂಬೈನ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಉಬರ್‌ನ ಸೇವೆ ಉತ್ತಮವಾಗಿಲ್ಲ ಎಂದು ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ತಿಳುವಳಿಕೆ ಮತ್ತು ಸೇವೆಯ ಗುಣಮಟ್ಟದ ಕೊರತೆಯಿಂದಾಗಿ ಮಹಿಳೆಗೆ ಉಂಟಾದ ಭಾವನಾತ್ಮಕ ತೊಂದರೆಯನ್ನು ಗಣನೆಗೆ ತೆಗೆದುಕೊಂಡು ಕೋರ್ಟ್ ಉಬರ್‌ಗೆ ದಂಡ ವಿಧಿಸಿದೆ.
ಘಟನೆಯ ಹಿನ್ನೆಲೆ: ಜೂನ್ 12, 2018 ರಂದು ಮಹಿಳೆ ವಿಮಾನ ನಿಲ್ದಾಣಕ್ಕೆ ಹೋಗಲು ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಟ್ಯಾಕ್ಸಿ ಬುಕ್ ಮಾಡಿದ ಸ್ಥಳದಿಂದ ಮುಂಬೈ ವಿಮಾನ ನಿಲ್ದಾಣವು 36 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲಿಗೆ ತಲುಪುವುದಕ್ಕೆ 2 ಗಂಟೆ ಸಾಕು. ಆದರೆ ಚಾಲಕ ವಿನಾಕಾರಣ ಸಿಎನ್ಜಿ ಗ್ಯಾಸ್ ಸ್ಟೇಷನ್ನಲ್ಲಿ 15 ರಿಂದ 20 ನಿಮಿಷ ತೆಗೆದುಕೊಂಡಿದ್ದಾನೆ. ಪರಿಣಾಮ, ಟ್ಯಾಕ್ಸಿ ನಿಲ್ದಾಣ ತಲುಪಲಿಲ್ಲ ಮತ್ತು ಇದರಿಂದಾಗಿ ಮಹಿಳೆ ವಿಮಾನ ತಪ್ಪಿಸಿಕೊಂಡಿದ್ದರು.