ಗುವಾಹಾಟಿ (ಅಸ್ಸೋಂ):ಐದು ವರ್ಷಗಳ ಹಿಂದೆ ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಇಲಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರ ಆಯೋಗ ಪರಿಹಾರ ಧನವಾಗಿ ಮಹಿಳೆಗೆ 67 ಸಾವಿರ ನೀಡುವಂತೆ ಚಿತ್ರಮಂದಿರಕ್ಕೆ ಆದೇಶಿಸಿದೆ.
ಅಕ್ಟೋಬರ್ 20, 2018 ರಂದು, ಅನಿತಾ ಎಂಬ ಮಹಿಳೆ ತಮ್ಮ ಕುಟುಂಬ ಸದಸ್ಯರೊಂದಿಗೆ ಜಿಲ್ಲೆಯ ಭಂಗಾಗರ್ ಪ್ರದೇಶದ ಗ್ಯಾಲೇರಿಯಾ ಥಿಯೇಟರ್‌ನಲ್ಲಿ ಚಲನಚಿತ್ರ ವೀಕ್ಷಿಸಲು ಹೋಗಿದ್ದರು. ಚಿತ್ರ ವೀಕ್ಷಣೆ ವೇಳೆ ಅನಿತಾ ಅವರ ಕಾಲಿಗೆ ಇಲಿಯೊಂದು ಕಾಲಿಗೆ ಕಚ್ಚಿತ್ತು. ತಕ್ಷಣ ಸಿನಿಮಾ ಹಾಲ್ ನಿಂದ ಹೊರಗೆ ಓಡಿ ಬಂದಿದ್ದರು. ಅವರ ಕಾಲಿಗೆ ಗಾಯವೂ ಆಗಿತ್ತು. ಇದನ್ನು ಚಿತ್ರಮಂದಿರದ ಆಡಳಿತ ಮಂಡಳಿಗೆ ಹೇಳಿದ್ದರು ಸಹ ಅನಿತಾಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡದೆ ಥಿಯೇಟರ್ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ನೊಂದ ಮಹಿಳೆ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಈ ಪ್ರಕರಣವನ್ನು ವಿಲೇವಾರಿ ಮಾಡಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಏಪ್ರಿಲ್ 25 ರಂದು ಗುವಾಹಟಿಯ ಗಲೇರಿಯಾ ಚಿತ್ರಮಂದಿರದ ಅಧಿಕಾರಿಗಳಿಗೆ ಮಹಿಳೆಯ ವೈದ್ಯಕೀಯ ವೆಚ್ಚ, ಮಾನಸಿಕ ನೋವುಂಟು ಮಾಡಿದ ವೆಚ್ಚವಾಗಿ ಒಟ್ಟು ₹ 67,282.48 ಪಾವತಿಸುವಂತೆ ಸೂಚಿಸಿದೆ. ತನಗೆ ಉಂಟಾದ ನಷ್ಟ ಮತ್ತು ಮಾನಸಿಕ ನೋವಿಗೆ ರೂ.6 ಲಕ್ಷ ಪರಿಹಾರ ನೀಡುವಂತೆ ಅನಿತಾ ಕೋರಿದ್ದರು.