ಮುಂಬೈ: ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಯುಎಸ್‌ನಲ್ಲಿ ಪದವಿ ದಿನಗಳಲ್ಲಿ ಗಾಂಜಾ ಸೇವಿಸುತ್ತಿದ್ದರು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಹಿತಿ ನೀಡಿದೆ. ನಿದ್ರಾಹೀನತೆ ಹಿನ್ನೆಲೆ ಇದನ್ನು ಬಳಕೆ ಮಾಡುತ್ತಿದ್ದರು ಎಂದು ಏಜೆನ್ಸಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ 20 ಜನರಲ್ಲಿ 14 ಜನರ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ಎನ್‌ಸಿಬಿ ಕಳೆದ ಅಕ್ಟೋಬರ್ನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಅವರಲ್ಲಿ ಆರ್ಯನ್ ಖಾನ್ ಸೇರಿದಂತೆ ಆರು ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಮುಕ್ತಿಗೊಳಿಸಲಾಗಿದೆ.
ಗಾಂಜಾ ಸೇವಿಸುತ್ತಿದ್ದೆ: ಎನ್‌ಸಿಬಿ ಮುಂದೆ ನೀಡಿದ ಹೇಳಿಕೆಯಲ್ಲಿ ಆರ್ಯನ್ ಖಾನ್, 2018ರಲ್ಲಿ ಅಮೆರಿಕಾದಲ್ಲಿ ಪದವಿ ಪಡೆಯುತ್ತಿದ್ದಾಗ ಅಲ್ಲಿ ಗಾಂಜಾವನ್ನು ಬಳಕೆ ಮಾಡುತ್ತಿದ್ದರಂತೆ. ಆ ಸಮಯದಲ್ಲಿ ಅವರು ನಿದ್ರಾಹೀನತೆ ಸಮಸ್ಯೆ ಹೊಂದಿದ್ದ ಪರಿಣಾಮ ಅಂತರ್ಜಾಲದಲ್ಲಿ ಲೇಖನಗಳನ್ನು ಓದಿ ಈ ಚಟಕ್ಕೆ ಬಿದ್ದಿದ್ದೆ ಎಂದು ಸ್ವತಃ ಅಧಿಕಾರಿಗಳ ಮುಂದೆ ಖಾನ್ ಹೇಳಿದ್ದಾರಂತೆ. ಈ ಬಗ್ಗೆ ಏಜೆನ್ಸಿ ಮಾಹಿತಿ ನೀಡಿದೆ.
ಮಾದಕ ವಸ್ತು ಸಂಬಂಧ ವಾಟ್ಸ್‌ಆ್ಯಪ್ ಮಾಡಲಾದ ಸಂದೇಶ ತಾನೇ ಮಾಡಿದ್ದು ಎಂದು ಖಾನ್ ಒಪ್ಪಿಕೊಂಡಿದ್ದಾರೆ. ಬಾಂದ್ರಾದಲ್ಲಿ (ಮುಂಬೈ) ಒಬ್ಬ ಡೀಲರ್ ಬಗ್ಗೆ ಖಾನ್ ಹೇಳಿದ್ದು, ಆತನ ಹೆಸರು ಹಾಗೂ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಆ ಡೀಲರ್ ಸಹ ಆರೋಪಿ ಆಗಿರುವ ಆಚಿತ್ಗೆ ಗೊತ್ತಿದ್ದಾನೆ ಎಂದೂ ಸಹ ಹೇಳಿದ್ದಾರಂತೆ.