ನವದೆಹಲಿ: ಸರ್ವರಿಗೂ ಸಮಾನತೆ, ಮೂಲ ಹಕ್ಕುಗಳನ್ನು ನೀಡಿರುವ ಭಾರತ ಸಂವಿಧಾನ ದಿನ ಇಂದು. 71ನೇ ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
Constitution Day today: ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಭೆ ಉದ್ದೇಶಿಸಿ ಮಾತನಾಡಿದರೆ, ರಾಷ್ಟ್ರಪತಿ ಕೋವಿಂದ್ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮತ್ತೊಂದೆಡೆ ಸಂವಿಧಾನದ ಪೀಠಿಕೆ ಓದುವ ಅಧಿವೇಶನದ ಲೈವ್‌ನಲ್ಲಿ ದೇಶದ ಜನ ಭಾಗವಹಿಸಲಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಸಂವಿಧಾನ ಸಭೆಯ ಚರ್ಚೆಯ ಡಿಜಿಟಲ್ ಆವೃತ್ತಿ ಬಿಡುಗಡೆ ಮಾಡಲಿದ್ದಾರೆ. ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಉಪಸ್ಥಿತರಿರಲಿದ್ದಾರೆ. ಪ್ರಧಾನಿ ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಎರಡು ದಿನಗಳ ಸಂವಿಧಾನ ದಿನಾಚರಣೆ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.