ಪಾಟ್ನಾ: ಬಿಹಾರ ಮಿಲಿಟರಿ ಪೊಲೀಸ್ (ಬಿಎಂಪಿ) ಕಾನ್ಸ್ಟೇಬಲ್ವೊಬ್ಬರು ಕೂದಲು ಕಸಿ ಮಾಡಿಕೊಂಡ ಮರುದಿನವೇ ಕಾರ್ಡಿಯಾಕ್ ಅರೆಸ್ಟ್(ಹೃದಯಸ್ತಂಭನ)ನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿ ಮನೋರಂಜನ್ ಪಾಸ್ವಾನ್ ಬೋರಿಂಗ್ ಕೆನಾಲ್ ರಸ್ತೆಯಲ್ಲಿರುವ ಖಾಸಗಿ ಚಿಕಿತ್ಸಾಲಯದಲ್ಲಿ ಬುಧವಾರ ಕೂದಲು ಕಸಿ ಮಾಡಿಸಿಕೊಂಡಿದ್ದರು. ಮರುದಿನ ಅವರು ಔಷಧದ ಅಡ್ಡಪರಿಣಾಮದಿಂದ ಸಾವನ್ನಪ್ಪಿದ್ದಾರೆ ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ. ಘಟನೆಯ ನಂತರ ಖಾಸಗಿ ಕ್ಲಿನಿಕ್‌ನ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ನಳಂದ ಜಿಲ್ಲೆಯ ರಾಜ್‌ಗಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲ್ ಬಿಘಾ ಗ್ರಾಮದವರಾದ ಮನೋರಂಜನ್ ಪಾಸ್ವಾನ್ಗೆ ಗಯಾದಲ್ಲಿ ಪೋಸ್ಟಿಂಗ್ ಆಗಿತ್ತು. ಪಾಟ್ನಾಗೆ ಕೂದಲು ಕಸಿ ಮಾಡಿಸಿಕೊಳ್ಳಲು ಬಂದಿದ್ದರು. ಕೂದಲು ಕಸಿ ಮಾಡಿಸಿಕೊಂಡ ತಕ್ಷಣವೇ ಮನೆಗೆ ಹಿಂತಿರುಗಿದ್ದ ಪಾಸ್ವಾನ್ ಚರ್ಮದಲ್ಲಿ ತುರಿಕೆಯಾಗುತ್ತಿರುವ ಬಗ್ಗೆ ಮನೆಯವರಲ್ಲಿ ಹೇಳಿಕೊಂಡಿದ್ದರು. ಅವರ ಸ್ನೇಹಿತ ಕಮಲ್ ಕುಮಾರ್ ಪಾಸ್ವಾನ್ ಅವರನ್ನು ಮರುದಿನ ಮತ್ತೆ ಆ ಕ್ಲಿನಿಕ್ಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಪಾಸ್ವಾನ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟ ಕಾರಣ ಕ್ಲಿನಿಕ್‌ನ ಸಿಬ್ಬಂದಿ ಬೇರೊಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಪೊಲೀಸರ ಪ್ರಕಾರ, ಪಾಸ್ವಾನ್ ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಪ್ಲಾಸ್ಟಿಕ್ ಸರ್ಜನ್, ಕಾರ್ಡಿಯಾಕ್ ಸರ್ಜನ್, ಇಂಟರ್ನಲ್ ಮೆಡಿಸಿನ್ ಮತ್ತು ಐಸಿಯು ತಜ್ಞರು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಒಂದು ಗಂಟೆಯ ನಂತರ ಪಾಸ್ವಾನ್ ಸಾವನ್ನಪ್ಪಿದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪಾಸ್ವಾನ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸಮರ್ಪಕ ಕೂದಲು ಕಸಿ ಚಿಕಿತ್ಸೆಯಿಂದ ಉಂಟಾದ ತೊಂದರೆಗಳಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅವರು ಹೃದಯಸ್ತಂಭನದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ನಾವು ಅವರ ಅಂಗಾಂಗಗಳನ್ನು ಸಂರಕ್ಷಿಸಿದ್ದೇವೆ. ಪೂರ್ಣ ವರದಿ ಬಂದ ನಂತರ ಅವರ ಸಾವಿಗೆ ನಿಖರವಾದ ಕಾರಣವನ್ನು ನೀಡುತ್ತವೆ ಎಂದು ಪಾಟ್ಲಿಪುತ್ರ ಕಾಲೊನಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಎಸ್‌ಕೆ ಸಾಹಿ ಮಾಹಿತಿ ನೀಡಿದರು.
ಮೃತರ ಕುಟುಂಬದವರು ಲಿಖಿತ ದೂರು ನೀಡಿದ್ದು, ನಾವು ತನಿಖೆ ನಡೆಸುತ್ತಿದ್ದೇವೆ. ಮೂಲಗಳ ಪ್ರಕಾರ ಕ್ಲಿನಿಕ್‌ನ ಸಿಬ್ಬಂದಿ ಪಾಸ್ವಾನ್ ಅವರಿಂದ ಪ್ರಿಸ್ಕ್ರಿಪ್ಷನ್ ಅನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಅವರಿಗೆ ಕೂದಲು ಕಸಿ ಚಿಕಿತ್ಸೆ ಮಾಡಿದ ಕ್ಲಿನಿಕ್ ಬೋರಿಂಗ್ ರಸ್ತೆಯಲ್ಲಿ ಇರುವುದರಿಂದ ಎಸ್‌ಕೆ ಪುರಿ ಪೊಲೀಸ್ ಠಾಣೆಗೂ ಈ ವರದಿಯನ್ನು ವರ್ಗಾಯಿಸಿದ್ದೇವೆ ಎಂದು ಎಸ್‌ಕೆ ಪುರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸತೀಶ್ ಸಿಂಗ್ ತಿಳಿಸಿದರು.
ಮೃತ ವ್ಯಕ್ತಿಗೆ ಮೇ 11ರಂದು ಮದುವೆ ನಿಶ್ಚಯವಾಗಿತ್ತು.