ಬಿನಾ (ಮಧ್ಯಪ್ರದೇಶ): ಪ್ರತಿಪಕ್ಷಗಳ ಇಂಡಿಯಾ (I.N.D.I.A) ಮೈತ್ರಿಕೂಟವನ್ನು 'ಘಮಂಡಿಯಾ' (ದುರಹಂಕಾರಿ) ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ, ಅದು ಸನಾತನ ಧರ್ಮವನ್ನು ನಾಶಮಾಡಲು ಬಯಸಿದೆ ಎಂದು ಆರೋಪಿಸಿದರು. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿನಾ ಸಂಸ್ಕರಣಾಗಾರದಲ್ಲಿ 49,000 ಕೋಟಿ ರೂ.ಗಳ ಪೆಟ್ರೋಕೆಮಿಕಲ್ಸ್ ಕಾಂಪ್ಲೆಕ್ಸ್ ಮತ್ತು ರಾಜ್ಯದ 10 ಕೈಗಾರಿಕಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಮಾತನಾಡಿದರು.
"ಘಮಂಡಿಯಾ' ಮೈತ್ರಿಕೂಟದ ನಾಯಕರು ಇತ್ತೀಚೆಗೆ ಮುಂಬೈನಲ್ಲಿ ಸಭೆ ಸೇರಿದ್ದರು. ಅವರಿಗೆ ಯಾವುದೇ ನೀತಿಗಳು ಅಥವಾ ಗುರಿಗಳು ಇಲ್ಲ. ಅವರ ಗುಂಪಿಗೆ ನಾಯಕನೂ ಇಲ್ಲ. ಅವರು ಸನಾತನ ಧರ್ಮದ ಮೇಲೆ ದಾಳಿ ಮಾಡುವ ಗುಪ್ತ ಕಾರ್ಯಸೂಚಿ ಹೊಂದಿದ್ದಾರೆ. ಸನಾತನ ಧರ್ಮವನ್ನು ನಾಶಪಡಿಸಲು ಅವರು ಬಯಸುತ್ತಿದ್ದಾರೆ. ಜನ ಇವರಿಂದ ಎಚ್ಚರಿಕೆಯಿಂದ ಇರಬೇಕು" ಎಂದು ಅವರು ಹೇಳಿದರು.
ಸನಾತನ ಧರ್ಮವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಡಿಎಂಕೆ ಮುಖಂಡ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಹೇಳಿದ್ದು, ಭಾರಿ ವಿವಾದಕ್ಕೀಡಾಗಿತ್ತು. ಇದರ ನಂತರ ಪ್ರಧಾನಿ ಮೋದಿ ಈಗ ನೇರವಾಗಿ ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೋರ್ವ ಡಿಎಂಕೆ ನಾಯಕ ಎ. ರಾಜಾ ಅವರು ಸನಾತನ ಧರ್ಮವನ್ನು ಕುಷ್ಠರೋಗಕ್ಕೆ ಹೋಲಿಸಿದ್ದರು.