ನವದೆಹಲಿ: ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ 4,00,000 ರೂ.ಗಳ ಪರಿಹಾರಕ್ಕಾಗಿ ನಿರ್ದೇಶನಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. ಕೊರೊನಾ ವೇಳೆ ಉಂಟಾಗಿರುವ ಸಮಸ್ಯೆ ಮತ್ತು ಅರ್ಜಿದಾರರು ಎತ್ತಿರುವ ಪ್ರಶ್ನೆಗಳು ನಿಜವಾಗಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಎಕ್ಸ್ಗ್ರೇಷಿಯಾ ನೀಡುವ ವಿಚಾರದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಷಾ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ಸಮಯದಲ್ಲಿ ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಸಂಬಂಧ ಉತ್ತರ ನೀಡಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದರು.
ವೈರಸ್‌ಗೆ ಬಲಿಯಾದವರಿಗೆ ಅಧಿಕಾರಿಗಳು ಮರಣ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ ಎಂದು ಅರ್ಜಿದಾರರೊಬ್ಬರ ಪರ ಹಾಜರಾದ ವಕೀಲರು ಕೋರ್ಟ್ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಮೆಹ್ತಾ, ನೀವು ಹೇಳಿದ್ದು ಸರಿಯಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಸಂಗ್ರಹಿಸಬೇಕಿದೆ. ಹಾಗೂ ಅರ್ಜಿದಾರರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಎರಡು ವಾರಗಳ ಸಮಯಾವಕಾಶ ಬೇಕೆಂದು ಕೇಳಿದರು.
ಇದಕ್ಕೆ ಗರಂ ಆದ ನ್ಯಾಯಪೀಠ, ಎರಡು ವಾರಗಳು ಯಾಕೆ ಬೇಕು? ಈ ಮೊದಲು ಅಫಿಡವಿಟ್ ಸಲ್ಲಿಕೆಗೆ 10 ದಿನಗಳನ್ನು ನೀಡಿದ್ದೇವೆ. ಈಗಲೂ ಹೆಚ್ಚಿನ ಸಮಯ ಯಾಕೆ ಬೇಕು ಎಂದು ಪ್ರಶ್ನಿಸಿತು.
ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಎಲ್ಲವನ್ನೂ ಪರಿಶೀಲಿಸಿ ಉತ್ತರ ನೀಡುತ್ತೇವೆ ಎಂದು ಮೆಹ್ತಾ ತಿಳಿಸಿದ್ರು. ಹಾಗಾಗಿ ಸುಪ್ರೀಂ ಜೂನ್ 18 ರೊಳಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.