ಹೈದರಾಬಾದ್: ಅಪ್ರಾಪ್ತ ಬಾಲಕಿಯೊಂದಿಗೆ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸಿದರೂ ಸಹ ಅತ್ಯಾಚಾರ ಎಂದು ಪರಿಗಣಿಸಲಾಗುವುದು ಎಂದು ತೆಲಂಗಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 15 ವರ್ಷದ ಬಾಲಕಿ 26 ವರ್ಷದ ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾಗಿದ್ದಳು. ಈ ಸಂಬಂಧ ತನ್ನ ಮಗಳಿಗೆ ಗರ್ಭಪಾತ ಮಾಡಲು ಅವಕಾಶ ನೀಡುವಂತೆ ಮಹಿಳೆ ಮಾಡಿದ ಮನವಿಯನ್ನು ಆಲಿಸಿದ ನ್ಯಾಯಾಲಯವು ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಾಲಕಿಯ ಕುಟುಂಬಸ್ಥರು ಮಗುವಿಗೆ ಗರ್ಭಪಾತ ಮಾಡುವಂತೆ ನಿಲೋಫರ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಆದರೆ, ವೈದ್ಯರು ಈ ಕ್ರಮವನ್ನು ನಿರಾಕರಿಸಿದ್ದರು. ಪರಿಣಾಮ ಸಂತ್ರಸ್ತೆಯ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದರು. ಸಂತ್ರಸ್ತೆ ತನ್ನ ಗರ್ಭಾವಸ್ಥೆಯ ಕಾರಣದಿಂದಾಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆ ನ್ಯಾಯಾಲಯವು ಆಕೆಗೆ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ನೀಡಿದೆ.
ಘಟನೆಯಿಂದ ಗರ್ಭಿಣಿಯಾಗಿರುವ ಅಪ್ರಾಪ್ತ ಬಾಲಕಿಯು ವೈಯಕ್ತಿಕ ಘನತೆಯಿಂದ ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಅವಳ ಮೇಲೆ ದೈಹಿಕ ಮತ್ತು ಮಾನಸಿಕ ಪರಿಣಾಮ ಬೀರುತ್ತದೆ. ಅತ್ಯಾಚಾರದಿಂದ ಉಂಟಾಗುವ ಅನಗತ್ಯ ಗರ್ಭಧಾರಣೆಯನ್ನು ತೊಡೆದು ಹಾಕಬಹುದು. ಹುಡುಗಿ ತನ್ನ ಸಂಬಂಧಿಕರೊಂದಿಗೆ ಸ್ವಇಚ್ಛೆಯಿಂದ ಹೋಗಿದ್ದರೂ ಸಹ, ಇದು ಒಪ್ಪಿಗೆಯ ಲೈಂಗಿಕತೆಯಾಗಿದ್ದರೂ ಸಹ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯವು ಉಲ್ಲೇಖಿಸಿದೆ.