ನವದೆಹಲಿ:ಅದಾನಿ ವಿಚಾರದಲ್ಲಿ ಕೇಂದ್ರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಬಜೆಟ್ ಅಧಿವೇಶನದಲ್ಲಿ ಮತ್ತು ಅದರ ನಂತರವೂ ಜೆಪಿಸಿ ತನಿಖೆಗೆ ಒತ್ತಾಯಿಸುವುದಾಗಿ ಹೇಳಿದೆ. ಅದಾನಿ ಸಮಸ್ಯೆಯ ಕುರಿತು ತನಿಖೆ ನಡೆಸುವಂತೆ ಆರ್‌ಬಿಐ ಮತ್ತು ಸೆಬಿಗೆ ತಾನು ಪತ್ರ ಬರೆದಿರುವುದಾಗಿ ಮತ್ತು ಈ ಸಂಬಂಧ ಫೆಬ್ರವರಿ 17 ರಂದು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುವುದಾಗಿ ಪಕ್ಷವು ಹೇಳಿದೆ. ಇದಕ್ಕೂ ಮುನ್ನ ಫೆಬ್ರವರಿ 6 ರಂದು ಪಕ್ಷವು ದೇಶಾದ್ಯಂತದ ಎಲ್ಐಸಿ ಮತ್ತು ಆರ್‌ಬಿಐ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿತ್ತು.
ಸಂಸತ್ತಿನೊಳಗೆ ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಾಯಕರ ಟೀಕೆಗಳಿಗೆ ಕಡಿವಾಣ ಹಾಕುವ ಕ್ರಮ ವಿರೋಧಿಸಿರುವ ಕಾಂಗ್ರೆಸ್, ಜೆಪಿಸಿ ಬೇಡಿಕೆಯನ್ನು ಮುಂದಿಟ್ಟರೆ ತನ್ನ ಸದಸ್ಯರನ್ನು ಅಮಾನತು ಮಾಡುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದೆ. ಅದಾನಿ ಸಮಸ್ಯೆಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಆರ್‌ಬಿಐ ಮತ್ತು ಸೆಬಿ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ.
ನಮ್ಮ ಹೋರಾಟ ಏನಿದ್ದರು ಪ್ರಧಾನಿ ವಿರುದ್ಧ- ರಮೇಶ್:ನಾವು ಯಾವುದೇ ಖಾಸಗಿ ಹೂಡಿಕೆಯ ವಿರುದ್ಧವಾಗಿಲ್ಲ. ನಮ್ಮ ಹೋರಾಟ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವಾಗಿದೆ ಮತ್ತು ಅವರು ನಿರ್ದಿಷ್ಟ ಕಂಪನಿಯೊಂದಕ್ಕೆ ಒಲವು ತೋರಿದ ಬಂಡವಾಳಶಾಹಿ ಧೋರಣೆಯ ವಿರುದ್ಧವಾಗಿದೆ. ಅದಾನಿ ಜತೆಗಿನ ಪ್ರಧಾನಿ ನಂಟುಗಳ ಬಗ್ಗೆ ಜೆಪಿಸಿ ಮಾತ್ರ ತನಿಖೆ ನಡೆಸಬಹುದು ಎಂದು ಎಐಸಿಸಿ ಸಂವಹನ, ಪ್ರಚಾರ ಮತ್ತು ಮಾಧ್ಯಮದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ನಾವು ಸಮಸ್ಯೆಯ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದರೆ ಟಿಪ್ಪಣಿಗಳನ್ನು ದಾಖಲೆಗಳಿಂದ ತೆಗೆಯಲಾಗುವುದು ಮತ್ತು ಅದು ಸದನದಿಂದ ಅಮಾನತುಗೊಳಿಸುವಿಕೆಗೆ ಕಾರಣವಾಗಬಹುದು ಎಂದು ನಮಗೆ ಬೆದರಿಕೆ ಹಾಕಲಾಗುತ್ತಿದೆ. ಇದು ಈ ಹಿಂದೆ ಎಂದೂ ಕಾಣದಂಥ ಪರಿಸ್ಥಿತಿಯಾಗಿದೆ. ಆದರೆ, ನಾವು ಸುಮ್ಮನಿರುವುದಿಲ್ಲ. ಬಜೆಟ್ ಅಧಿವೇಶನ ಮುಗಿಯುವವರೆಗೂ ಮತ್ತು ಅದರ ನಂತರವೂ ನಾವು ಈ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸುತ್ತೇವೆ. ಈ ನಿಟ್ಟಿನಲ್ಲಿ ಫೆ.17ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದರು.