ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದ್ದಂತೆಯೇ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ರೇಸ್ ಪ್ರಾರಂಭವಾಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಪಕ್ಷದ ವಿಜಯೋತ್ಸವ ಆಚರಿಸಲು ಗಾಂಧಿ ಭವನದವರೆಗೆ ರ್ಯಾಲಿ ನಡೆಸಿದ್ದು ಗಮನಾರ್ಹವಾಗಿದೆ. ರ್ಯಾಲಿ ಮೂಲಕ ಗಾಂಧಿ ಭವನಕ್ಕೆ ಬಂದ ರೇವಂತ್ ರೆಡ್ಡಿ ಅವರನ್ನು ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಅಧಿಕಾರಿಗಳು ಭೇಟಿಯಾಗಿದ್ದು ಬಹಳ ವಿಶೇಷವಾಗಿದೆ. ನಲ್ಗೊಂಡ ಮತ್ತು ಖಮ್ಮಮ್ ಜಿಲ್ಲೆಗಳ ಮುಂಚೂಣಿ ಕಾಂಗ್ರೆಸ್ ಮುಖಂಡರಾದ ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಮತ್ತು ಮಲ್ಲು ಭಟ್ಟಿ ವಿಕ್ರಮಾರ್ಕ ಇವರೆಲ್ಲ ಕೂಡ ಸಿಎಂ ಹುದ್ದೆಯ ರೇಸ್ನಲ್ಲಿದ್ದಾರೆ.
ಪಕ್ಷದ ಗೆಲುವಿನ ಸಂಭ್ರಮವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಹೈದರಾಬಾದ್ನಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ರೇವಂತ್ ರೆಡ್ಡಿ ಅವರ ಪೋಸ್ಟರ್ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
ಮತ್ತೊಂದಡೆ, ಪಕ್ಷದ ಕಚೇರಿ ಮತ್ತು ಹೈದರಾಬಾದ್ನ ರೇವಂತ್ ರೆಡ್ಡಿ ಅವರ ಮನೆಯ ಹೊರಗೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ನೃತ್ಯ ಮಾಡುತ್ತಿದ್ಧಾರೆ. 2024 ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ತೆಲಂಗಾಣ ಚುನಾವಣಾ ಫಲಿತಾಂಶವು ಕಾಂಗ್ರೆಸ್ಗೆ ನಿರ್ಣಾಯಕವಾಗಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿನ ಗೆಲುವು ದಕ್ಷಿಣದಲ್ಲಿ ಕಾಂಗ್ರೆಸ್ನ ಅಸ್ತಿತ್ವ ಬಲಪಡಿಸಲು ಸಹಕಾರಿಯಾಗಲಿದೆ.