ಕರ್ನಾಟಕ

karnataka

ETV Bharat / bharat

ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಲಿದೆ.. ರಾಹುಲ್, ಪ್ರಿಯಾಂಕಾ ಪ್ರಚಾರ ನಡೆಸಲಿದ್ದಾರೆ ಎಂದ ಖರ್ಗೆ

ಕರ್ನಾಟಕ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

congress-will-win-karnataka-assembly-polls-says-mallikarjun-kharge
ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಲಿದೆ... ರಾಹುಲ್, ಪ್ರಿಯಾಂಕಾ ಪ್ರಚಾರ ನಡೆಸಲಿದ್ದಾರೆ ಎಂದ ಖರ್ಗೆ

By

Published : Mar 29, 2023, 5:21 PM IST

ನವದೆಹಲಿ:ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಗೆಲುವು ಸಾಧಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗೆಲ್ಲುವ ಅಭ್ಯರ್ಥಿಗಳ ಅಭಿಪ್ರಾಯದೊಂದಿಗೆ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆಯನ್ನು ನಿರ್ಧರಿಸಲಿದೆ ಎಂದೂ ಖರ್ಗೆ ತಿಳಿಸಿದ್ದಾರೆ.

ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಪಕ್ಷದ ಬಲ ಮತ್ತಷ್ಟು ಹೆಚ್ಚಿಸಿಕೊಳ್ಳಲು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪ್ರಚಾರ ನಡೆಸಲಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಿದರು.

ಇದನ್ನೂ ಓದಿ:Explained: ಚುನಾವಣಾ ನೀತಿ ಸಂಹಿತೆ ಎಂದರೇನು? ತಿಳಿಯಬೇಕಾದ 10 ನಿಯಮಗಳು

ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಜನರು ಮುಂದಿಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಲಾಗಿದೆ. ಇದನ್ನು ಅರಿತು ಪ್ರಧಾನಿ ತಮ್ಮ ಸಂಪುಟದ ಸಚಿವರನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ. ಅಲ್ಲದೇ, ಸ್ವತಃ ಪ್ರಧಾನಿ ಅವರು ಮತ್ತು ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಪಕ್ಷದ ಹಿಂದೆ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.

ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಚುನಾವಣೆಯಲ್ಲೇ ಗೆದ್ದೇ ಗೆಲ್ಲುತ್ತದೆ. ಚುನಾವಣೆ ನಂತರ ಮುಖ್ಯಮಂತ್ರಿಯನ್ನು ನಿರ್ಧರಿಸಲಾಗುವುದು. ಗೆದ್ದ ಶಾಸಕರ ಅಭಿಪ್ರಾಯವನ್ನು ಪಡೆದು ನಂತರ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಎಂದು ನಾನು ನಿಖರವಾಗಿ ಘೋಷಿಸಲು ಸಾಧ್ಯವಿಲ್ಲ. ಆದರೆ, ಪಕ್ಷ ಗೆಲ್ಲುತ್ತದೆ ಎಂದು ಹೇಳಬಲ್ಲೆ ಎಂದು ಖರ್ಗೆ ತಿಳಿಸಿದರು.

ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ - ಜೋಶಿ:ಮತ್ತೊಂದೆಡೆ, ಬಿಜೆಪಿ ನಾಯಕ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಕರ್ನಾಟಕ ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ಭ್ರಷ್ಟಾಚಾರದ ವಿಷಯದಲ್ಲಿ ಡಿಕೆ ಶಿವಕುಮಾರ್​ ದೊಡ್ಡ ಕಾಂಗ್ರೆಸ್ ನಾಯಕರನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿಯಿಂದ ಬೂತ್​ ವಿಜಯ ಮತ್ತು ವಿಜಯ ಸಂಕಲ್ಪ ಅಭಿಯಾನ ನಡೆಸಲಾಗಿದೆ. ರಾಜ್ಯದ ವಿಧಾನಸಭೆ ಕ್ಷೇತ್ರದ ಮೂಲೆ-ಮೂಲೆಗೂ ಅಭಿಯಾನಗಳು ತಲುಪಿವೆ. ತಮ್ಮ ಕಾರ್ಯಕರ್ತರು ತುಂಬಾ ಉತ್ಸಾಹದಲ್ಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಪ್ರಮಾಣ ಬಹುತಮದ ಸರ್ಕಾರ ಇದೆ. ಮತ್ತೊಮ್ಮೆ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​​ ಹೇಳಿದರು.

ಪ್ರಧಾನಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ವಿಶೇಷ ಕಾರ್ಯಗಳು ಆಗಿವೆ. ಬೊಮ್ಮಾಯಿ ಸರ್ಕಾರವು ಬಡವರು, ಕೃಷಿಕರು, ಯುವಕರ ಪರವಾದ ಕೆಲಸ ಮಾಡಿದೆ. ನಮ್ಮ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನತೆಯ ಮುಂದೆ ಹೋಗುತ್ತೇವೆ. ಕರ್ನಾಟಕದ ಜನತೆ ಕೂಡ ಬಿಜೆಪಿಗೆ ಸಂಪೂರ್ಣ ಬಹುಮತ ನೀಡಲಿದ್ದಾರೆ ಎಂದು ಅರುಣ್​ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಮೇ 10ರಂದು ಎಲ್ಲ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಏಪ್ರಿಲ್​ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್​ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್​ 21ರಂದು ನಾಮಪತ್ರ ಪರಿಶೀಲನೆ ಜರುಗಲಿದೆ. ಏಪ್ರಿಲ್​ 24 ನಾಮಪತ್ರ ವಾಪಸ್​ಗೆ ಕೊನೆಯ ದಿನಾಂಕವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ:ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ

ABOUT THE AUTHOR

...view details