ನವದೆಹಲಿ:ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮುಂದೆ ಹಾಜರಾಗುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ. ಈ ವಿಚಾರವಾಗಿ ನಾಳೆ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸಲಿದೆ.
ಜೂನ್ 8ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ದಿನಾಂಕದಂದು ಅವರು ಹಾಜರಾಗಿಲ್ಲ. ಜೊತೆಗೆ ಸೋನಿಯಾ ಅವರಿಗೆ ಕೋವಿಡ್ ಕಾಣಿಸಿಕೊಂಡ ಕಾರಣ ವಿಚಾರಣೆಯಿಂದ ದೂರ ಉಳಿದಿದ್ದರು. ಇದೀಗ ಇಬ್ಬರೂ ಮುಖಂಡರಿಗೆ ಹೊಸ ದಿನಾಂಕ ನೀಡಲಾಗಿದೆ.
ರಾಹುಲ್ ಗಾಂಧಿ ಜೂನ್ 13 ಹಾಗೂ ಸೋನಿಯಾ ಗಾಂಧಿ ಅವರಿಗೆ ಜೂನ್ 23ರಂದು ಜಾರಿ ನಿರ್ದೇಶನಾಲಯದ ಎದುರು ಹಾಜರಾಗಲು ಸಮನ್ಸ್ ನೀಡಲಾಗಿದ್ದು ಹೀಗಾಗಿ, ನಾಳೆ ಕಾಂಗ್ರೆಸ್ ಸುದ್ದಿಗೊಷ್ಠಿ ನಡೆಸಲಿದೆ.
ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಪ್ರಕರಣ : ರಾಹುಲ್ ಗಾಂಧಿಗೆ ಇಡಿಯಿಂದ ಹೊಸ ಸಮನ್ಸ್ ಜಾರಿ
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?:ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಯಂಗ್ ಇಂಡಿಯನ್‌ನಲ್ಲಿ ಪಕ್ಷದ ಪ್ರಚಾರಕ್ಕಾಗಿ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇತ್ತೀಚೆಗೆ ಪ್ರಕರಣ ದಾಖಲಿಸಲಾಗಿದೆ. ನ್ಯಾಷನಲ್ ಹೆರಾಲ್ಡ್ ಅನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸುತ್ತಿದೆ ಮತ್ತು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ.