ನವದೆಹಲಿ: ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಲಿದೆ ಮತ್ತು ಪಕ್ಷ ತಾನು ಎದುರಿಸುತ್ತಿರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖರ್ಗೆ ಔಪಚಾರಿಕವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳ ಕಾಲ ಜವಾಬ್ದಾರಿಯನ್ನು ನಿಭಾಯಿಸಿದ ನಂತರ ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಲು ತಾವು ನಿರಾಳವಾಗಿರುವುದಾಗಿ 75 ವರ್ಷ ವಯಸ್ಸಿನ ಸೋನಿಯಾ ಗಾಂಧಿ ತಿಳಿಸಿದರು.
ಇಲ್ಲಿನ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ, ಕಾಂಗ್ರೆಸ್‌ನ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಮಾತನಾಡಿದರು.
ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ವಿವೇಚನೆಯಿಂದ ಆಯ್ಕೆಯಾದ ಪಕ್ಷದ ಹೊಸ ಅಧ್ಯಕ್ಷರು ಅನುಭವಿಕ, ತಳಮಟ್ಟದ ನಾಯಕರಾಗಿದ್ದು, ತನ್ನ ಪರಿಶ್ರಮದಿಂದ ಪಕ್ಷದಲ್ಲಿ ಇಂಥದೊಂದು ಉನ್ನತ ಸ್ಥಾನಕ್ಕೇರಿರುವ ಖರ್ಗೆಯವರ ಆಯ್ಕೆಯಿಂದ ತಮಗೆ ತೃಪ್ತಿಯಾಗಿದೆ ಎಂದು ಸೋನಿಯಾ ಹೇಳಿದರು. ಪಕ್ಷವು ಖರ್ಗೆ ಅವರಿಂದ ಸ್ಫೂರ್ತಿ ಮತ್ತು ಸಂದೇಶ ಪಡೆಯುತ್ತದೆ ಮತ್ತು ಅವರ ನಾಯಕತ್ವದಲ್ಲಿ ಪಕ್ಷವು ನಿರಂತರವಾಗಿ ಬಲಗೊಳ್ಳುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ ಎಂದರು.
ದೇಶದ ಪ್ರಜಾಸತ್ತಾತ್ಮಕ ತತ್ವಗಳಿಗೆ ಉಂಟಾದ ಅಪಾಯವನ್ನು ನಾವು ಹೇಗೆ ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂಬುದು ದೊಡ್ಡ ಸವಾಲಾಗಿದೆ. ನೀವು ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ಹೇಗೆ ಆಯ್ಕೆ ಮಾಡಿದ್ದೀರಿ, ಅದೇ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ದೇಶದ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸುವ ಶಕ್ತಿಯಾಗಿ ಒಗ್ಗಟ್ಟಿನಿಂದ ಹೊರಹೊಮ್ಮಲಿದ್ದಾರೆ ಎಂದು ನಾನು ನಂಬುತ್ತೇನೆ ಎಂದು ಹಿಂದಿಯಲ್ಲಿ ಮಾತನಾಡಿದ ಸೋನಿಯಾ ತಿಳಿಸಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಭಾರತ್ ಜೋಡೋ: ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ