ಲಖನೌ (ಉತ್ತರ ಪ್ರದೇಶ): ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಬೆನ್ನಲ್ಲೇ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ದಲಿತರನ್ನು ಕಾಂಗ್ರೆಸ್ ರಾಜಕೀಯ ಬಲಿಪಶುಗಳನ್ನಾಗಿ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬುಧವಾರ ಪ್ರಕಟವಾದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 80 ವರ್ಷದ ಖರ್ಗೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದೇಶದ ಹಳೆಯ ರಾಜಕೀಯ ಪಕ್ಷದ ಉನ್ನತ ಹುದ್ದೆಗೇರಿದ ಮೂರನೇ ದಲಿತ ನಾಯಕರಾಗಿದ್ದಾರೆ. ಅಕ್ಟೋಬರ್ 26ರಂದು ಖರ್ಗೆ ತಮ್ಮ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ:ಖರ್ಗೆಗೆ ಪ್ರಧಾನಿ ಅಭಿನಂದನೆ: ಅಧಿಕಾರಾವಧಿ ಫಲಪ್ರದವಾಗಿರಲಿ ಎಂದ ಮೋದಿ
ಈ ಕುರಿತು ಇಂದು ಟ್ವೀಟ್ ಮಾಡಿರುವ ಮಾಯಾವತಿ, ಕಾಂಗ್ರೆಸ್ ಯಾವಾಗಲೂ ದೀನದಲಿತರ ಉದ್ಧಾರ ಹಾಗೂ ಪೂಜ್ಯ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಮತ್ತು ಅವರ ಸಮಾಜವನ್ನು ನಿರ್ಲಕ್ಷಿಸಿದೆ ಅಥವಾ ತಿರಸ್ಕರಿಸಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಒಳ್ಳೆಯ ದಿನಗಳಲ್ಲಿ ದಲಿತೇತರರನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತದೆ. ಈಗಿನಂತೆ ಅಧಿಕಾರದಿಂದ ದೂರವಿರುವ ಕೆಟ್ಟ ದಿನಗಳಲ್ಲಿ ದಲಿತರನ್ನು ಮುಂದೆ ಮಾಡುತ್ತದೆ. ಇದು ಮೋಸ ಮತ್ತು ಹುಸಿ ರಾಜಕಾರಣವಲ್ಲವೇ?, ಇದು ದಲಿತರ ಮೇಲಿನ ಕಾಂಗ್ರೆಸ್‌ನ ನಿಜವಾದ ಪ್ರೀತಿಯೇ ಎಂದು ಜನರು ಕೇಳುತ್ತಿದ್ದಾರೆ ಎಂದು ಮಾಯಾವತಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಖರ್ಗೆ ಗೆಲುವು ಕಾಂಗ್ರೆಸ್ ಗೆಲುವೆಂದ ತರೂರ್: ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಖರ್ಗೆ ಕರೆ