ನವದೆಹಲಿ:ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದ ಅಪ್ರಾಪ್ತ ದಲಿತ ಬಾಲಕಿಯ ಕುಟುಂಬ ಸದಸ್ಯರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಘಟನೆಯ ಕುರಿತು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಆಕೆ ದೇಶದ ಮಗಳು ಎಂದು ಹೇಳಿದ್ದಾರೆ.
'ನಾನು ಕುಟುಂಬದವರೊಂದಿಗೆ ಮಾತನಾಡಿದ್ದೇನೆ. ಅವರು ನ್ಯಾಯ ಬಯಸಿದ್ದಾರೆ. ನಮಗೆ ನ್ಯಾಯ ಸಿಗುತ್ತಿಲ್ಲ ಹಾಗೂ ತಮಗೆ ಸಹಾಯ ಬೇಕು ಎಂದು ಅವರು ಕೋರುತ್ತಿದ್ದಾರೆ. ನಾವು ಅದನ್ನು ಮಾಡುತ್ತೇವೆ. ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಿದ್ದೇನೆ. ಅವರಿಗೆ ನ್ಯಾಯ ಸಿಗುವವರೆಗೂ ನಾನು ಅವರ ಜತೆಗೆ ಇರುತ್ತಾರೆ' ಎಂದು ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಟ್ವೀಟ್.. ಕೇಂದ್ರದ ವಿರುದ್ಧ ವಾಗ್ದಾಳಿ
'ತಮ್ಮ ಮಗಳು, ಈ ದೇಶದ ಮಗಳು, ಆಕೆಗೆ ನ್ಯಾಯ ಸಿಗಬೇಕು ಎಂದು ಅವರ ಪೋಷಕರು ಕಣ್ಣೀರಿಡುತ್ತಾ ಒಂದೇ ಮಾತನ್ನು ಹೇಳಿದ್ದಾರೆ. ಈ ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ದೆಹಲಿ ಅತ್ಯಾಚಾರಿಗಳ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಮೃತರ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವುದರೊಂದಿಗೆ ದೆಹಲಿಯಾದ್ಯಂತ ಮೇಣದಬತ್ತಿ ಮೆರವಣಿಗೆಯನ್ನು ಪಕ್ಷವು ಯೋಜಿಸಿದೆ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ಹೇಳಿದರು.
ಜೊತೆಗೆ ಈ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ/ಪಂಗಡದ ಆಯೋಗವನ್ನು ಕೂಡಾ ಒತ್ತಾಯಿಸಿದೆ.
ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿ, ಆಕೆಯ ಶವವನ್ನು ಪೋಷಕರ ಅನುಮತಿ ಇಲ್ಲದೇ ದೆಹಲಿಯ ಹಳೆ ನಂಗಾಲ್ ಸ್ಮಶಾನದಲ್ಲಿ ದಹನ ಮಾಡಲಾಗಿತ್ತು. ದೆಹಲಿ ಪೊಲೀಸರು ಸಂತ್ರಸ್ತೆಯ ತಾಯಿಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿದ್ದರು.
ರಾಹುಲ್ ವಿರುದ್ಧ ಕ್ರಮಕ್ಕೆ ಆಗ್ರಹ:
ಸಂತ್ರಸ್ತೆಯ ಕುಟುಂಬದ ಫೋಟೋವನ್ನು ಟ್ವಿಟರ್ಬಲ್ಲಿ ಹಂಚಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ಸಂಸ್ಥೆ ಎನ್‌ಸಿಪಿಸಿಆರ್ ಟ್ವಿಟರ್ಗೆ ಆದೇಶಿಸಿದೆ. ಇದು ಬಾಲ ನ್ಯಾಯ ಮತ್ತು ಪೊಕ್ಸೊ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿದ್ದ ಬಿಜೆಪಿ ವರ್ಕಾರ ಸಂಬೀತ್ ಪಾತ್ರಾ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವುದು ಕಾನೂನು ರೀತ್ಯಾ ಅಪರಾಧವಾಗಿದೆ. ಆದರೆ, ರಾಹುಲ್ ಗಾಂಧಿಯವರು ಸಂತ್ರಸ್ತೆಯ ಕುಟುಂಬದವರ ಫೋಟೊಗಳನ್ನು ಟ್ವೀಟ್ ಮಾಡುವ ಮೂಲಕ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ‘ಪೋಕ್ಸೊ‘ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿದ್ದರು.