ನವದೆಹಲಿ: ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ಪೂರ್ಣಗೊಂಡಿದೆ. ರಾಜ್ಯಾದ್ಯಂತ ಶೇ.64ರಷ್ಟು ಮತದಾನವಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಚುನಾವಣೋತ್ತರ ಸಮೀಕ್ಷೆಗಳು (Exit Poll Result) ಹೊರಬಂದಿವೆ. ಆಡಳಿತಾರೂಢ ಬಿಆರ್‌ಎಸ್ ಹಿನ್ನಡೆ ಅನುಭವಿಸಲಿದ್ದು, ಕಣದಲ್ಲಿ ಪ್ರಬಲ ಪೈಪೋಟಿವೊಡ್ಡಿರುವ ಕಾಂಗ್ರೆಸ್‌ಗೆ ಅನುಕೂಲವಾಗಿದೆ ಎಂದು ಸಮೀಕ್ಷೆಗಳು ಭವಿಷ್ಯ ಹೇಳಿವೆ. ಇದರಿಂದಾಗಿ ಡಿ.3ರ ಅಧಿಕೃತ ಫಲಿತಾಂಶ ಪ್ರಕಟಕ್ಕೂ ಮುನ್ನ ಕಾಂಗ್ರೆಸ್ ಪಾಳಯದಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.
ತೆಲಂಗಾಣದಲ್ಲಿ ಚುನಾವಣಾ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸನಿಹಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟಿಸಿವೆ. ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ರಚಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಇದರ ಶ್ರೇಯಸ್ಸು ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಲ್ಲುತ್ತದೆ. ಆಡಳಿತಾರೂಢ ಬಿಆರ್‌ಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ವಿರುದ್ಧ ರಾಹುಲ್ ಗಾಂಧಿ ಆಕ್ರಮಣಕಾರಿ ಪ್ರಚಾರ ಮಾಡಿರುವುದೇ ಈ ಫಲಿತಾಂಶ ಸಾಧ್ಯವಾಗಿದೆ ಎಂದು ಪಕ್ಷ ತಿಳಿಸಿದೆ.
''ನಾವು ಖಂಡಿತವಾಗಿಯೂ ತೆಲಂಗಾಣದಲ್ಲಿ ಸರ್ಕಾರವನ್ನು ರಚಿಸುತ್ತೇವೆ. ಬಿಆರ್‌ಎಸ್ ಮತ್ತು ಬಿಜೆಪಿ ಎರಡನ್ನೂ ಗುರಿಯಾಗಿಸಿ, ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಜನತೆಗೆ ಎತ್ತಿತೋರಿಸಿ ಮತ್ತು ರಾಜ್ಯದ ಬಗ್ಗೆ ಕಾಂಗ್ರೆಸ್ ಹೊಂದಿರುವ ದೃಷ್ಟಿಕೋನವನ್ನು ವಿವರಿಸಿದ ರಾಹುಲ್ ಗಾಂಧಿ ಅವರ ಕಾರ್ಯತಂತ್ರಕ್ಕೆ ಎಲ್ಲ ಶ್ರೇಯಸ್ಸು ಸಲ್ಲಬೇಕು'' ಎಂದು ತೆಲಂಗಾಣ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ರೋಹಿತ್ ಚೌಧರಿ 'ಈಟಿವಿ ಭಾರತ್'ಗೆ ತಿಳಿಸಿದರು.
ಇದೇ ವೇಳೆ, ತೆಲಂಗಾಣದಲ್ಲಿ ರಾಹುಲ್ ಗಾಂಧಿ ಅವರ ಕೇಂದ್ರೀಕೃತ ಕಾರ್ಯತಂತ್ರವು ಚುನಾವಣಾ ಆಖಾಡದಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೈ-ಪ್ರೊಫೈಲ್ ಮುನುಗೋಡು ವಿಧಾನಸಭಾ ಉಪಚುನಾವಣೆಯವರೆಗೆ ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಮುಖ ಸ್ಪರ್ಧಿಯಾಗಿ ಕಂಡಿರಲ್ಲ. ಆದರೆ, ಈ ಬಾರಿ ಬಿಆರ್‌ಎಸ್‌ಗೆ ನಿಜವಾದ ಸವಾಲೆಂದರೆ, ಕಾಂಗ್ರೆಸ್ ಎಂಬುವುದು ಸಾಬೀತಾಗಿದೆ ಎಂದು ಎಐಸಿಸಿ ಹಿರಿಯ ಮುಖಂಡರೊಬ್ಬರು ಹೇಳಿದರು.
ಇದನ್ನೂ ಓದಿ:Exit Poll Result: ರಾಜಸ್ಥಾನದಲ್ಲಿ ಬಿಜೆಪಿ, ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್, ತೆಲಂಗಾಣದಲ್ಲಿ ಬಿಆರ್‌ಎಸ್‌ಗೆ ಹಿನ್ನಡೆ, ಮಧ್ಯಪ್ರದೇಶದಲ್ಲಿ ನೇರ ಹಣಾಹಣಿ
ಬಿಆರ್‌ಎಸ್-ಬಿಜೆಪಿ ಎರಡನ್ನೂ ಕಾಂಗ್ರೆಸ್ ಗುರಿಯಾಗಿಸಿಕೊಂಡು ಮತ್ತು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪದ ಬಗ್ಗೆ ಜನತೆಯಲ್ಲಿದ್ದ ಕೋಪವನ್ನು ಬಳಸಿಕೊಂಡಿದ್ದು ಕಾಂಗ್ರೆಸ್‌ಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ರಾಹುಲ್ ಸಿದ್ಧಪಡಿಸಿದ ವಿವರವಾದ ಯೋಜನೆಯನ್ನು ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲಾಯಿತು. ರಾಜ್ಯ ತಂಡವನ್ನು ಒಗ್ಗೂಡಿಸಲು ಮಾಣಿಕ್ರಾವ್ ಠಾಕ್ರೆ ಅವರನ್ನು ನೂತನ ಎಐಸಿಸಿ ರಾಜ್ಯ ಉಸ್ತುವಾರಿಯಾಗಿ ನೇಮಿಸಲಾಯಿತು. ಮತದಾರರೊಂದಿಗೆ ಸಂಪರ್ಕ ಸಾಧಿಸಲು ಯಾತ್ರೆಗಳನ್ನು ಪ್ರಾರಂಭಿಸಲು ರಾಜ್ಯ ನಾಯಕರಿಗೆ ಸೂಚಿಸಲಾಯಿತು. ಬಿಆರ್‌ಎಸ್ ಮತ್ತು ಬಿಜೆಪಿ ಎರಡೂ ಒಂದೇ ಎಂಬುವುದನ್ನು ನಾವು ಮತದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಪಕ್ಷದ ಒಳಗಿನವರು ತಿಳಿಸಿದರು.
''ವಾಸ್ತವವಾಗಿ 2018 ರ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದವರು, ರಾಜ್ಯದಲ್ಲಿ ಬಿಆರ್‌ಎಸ್ ವಿರುದ್ಧ ಕೇಂದ್ರ ಸರ್ಕಾರದಿಂದ ಕೆಲವು ಕ್ರಮಗಳನ್ನು ನಿರೀಕ್ಷಿಸಿದ್ದರು. ಅದೇನೂ ಆಗದೇ ಇದ್ದಾಗ ಬಿಜೆಪಿಯ ಬೆಂಬಲಿಗರು ಮತ್ತು ರಾಜ್ಯದ ಹಿರಿಯ ನಾಯಕರು ಗಲಿಬಿಲಿಗೊಂಡರು. ಇದರಿಂದ ಮುನುಗೋಡು ಮಾಜಿ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ, ನಟಿ ವಿಜಯಶಾಂತಿ ಸೇರಿದಂತೆ ಹಲವರು ಕಾಂಗ್ರೆಸ್‌ಗೆ ಮರಳಿದರು. ಜೊತೆಗೆ ಸಾರ್ವಜನಿಕ ಮನಸ್ಥಿತಿಯನ್ನು ಗ್ರಹಿಸಿದ ಹಲವಾರು ಬಿಆರ್‌ಎಸ್ ನಾಯಕರು ಕೂಡ ಚುನಾವಣೆಗೆ ಮುನ್ನ ಪಕ್ಷಕ್ಕೆ ಸೇರ್ಪಡೆಗೊಂಡರು'' ಎಂದು ರೋಹಿತ್ ಚೌಧರಿ ವಿವರಿಸಿದರು.
ರೋಹಿತ್ ಚೌಧರಿ ಪ್ರಕಾರ, ರಾಜ್ಯದಲ್ಲಿ ಪಕ್ಷದ ನಿರೀಕ್ಷೆಯಂತೆಯೇ ಮತದಾನವಾಗಿದೆ. ಕಳೆದ 10 ವರ್ಷಗಳಿಂದ ಬಿಆರ್‌ಎಸ್ ಸರ್ಕಾರದಿಂದ ಮತದಾರರು ಬೇಸತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಲಾಭ ಪಡೆದಿದೆ. ಈ ಹಿಂದೆ ನೀಡಿದ ಯಾವ ಭರವಸೆಯೂ ಈಡೇರದ ಕಾರಣ ಗ್ರಾಮೀಣ ಮತದಾರರು ಬಿಆರ್‌ಎಸ್‌ನಿಂದ ಕಂಗೆಟ್ಟಿದ್ದಾರೆ. ರಾಜ್ಯ ಸರ್ಕಾರ ತನ್ನ ಭರವಸೆಗಳ ಬಗ್ಗೆ ಗಂಭೀರವಾಗಿದ್ದರೆ, ಕಳೆದ 10 ವರ್ಷಗಳಿಂದ ಏಕೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಗ್ರಾಮಸ್ಥರೇ ಕೇಳುತ್ತಿದ್ದರು.
ಮತ್ತೊಂದೆಡೆ, ಕಾಂಗ್ರೆಸ್‌ನ ಆಶ್ವಾಸನೆಗಳ ಮತದಾರರು ಒಲವು ಹೊಂದಿದರು ಮತ್ತು ನೆರೆಯ ಕರ್ನಾಟಕದಲ್ಲಿ ಇದೇ ರೀತಿಯ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿರುವುದರಿಂದ ಜನತೆಯಲ್ಲಿ ನಂಬಿಕೆಗೆ ಕಾರಣವಾಯಿತು. ನಾವು ನಮ್ಮ ಚುನಾವಣಾ ಪ್ರಣಾಳಿಕೆಯನ್ನು ಮೊದಲೇ ಬಿಡುಗಡೆ ಮಾಡಿದ್ದೇವೆ. ಬಿಆರ್‌ಎಸ್ ತನ್ನ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಸಾಕಷ್ಟು ಸಮಯವನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡುವಲ್ಲಿ ನಿರತವಾಗಿದ್ದ ಬಿಆರ್‌ಎಸ್, ಬಿಜೆಪಿಯ ಬಗ್ಗೆ ಕಡಿಮೆ ಮಾತನಾಡಿದೆ. ಈ ಆಟವನ್ನು ಅರಿತ ಮತದಾರರು ಕಾಂಗ್ರೆಸ್‌ಗೆ ಈ ಬಾರಿ ಅವಕಾಶ ನೀಡುವ ಮನಸ್ಸು ಮಾಡಿದ್ದಾರೆ ಎಂದು ಮುಖಂಡರು ಹೇಳಿದರು.
ಇದನ್ನೂ ಓದಿ:ತೆಲಂಗಾಣ ಚುನಾವಣೋತ್ತರ ಸಮೀಕ್ಷೆ: 'ಕೈ' ಗೆ ಸಿಹಿ, ಬಿಆರ್‌ಎಸ್ ಹ್ಯಾಟ್ರಿಕ್ ಕನಸಿಗೆ ಹಿನ್ನಡೆ, ಬಿಜೆಪಿಗೆ ಎಷ್ಟು ಸ್ಥಾನ?