ಅಹಮದಾಬಾದ್(ಗುಜರಾತ್):ಗುಜರಾತ್ ಚುನಾವಣಾ ಕಣ ರಂಗೇರಿರುವ ಮಧ್ಯೆಯೇ ಕಾಂಗ್ರೆಸ್ ಹಲವು ಭರವಸೆಗಳ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. 10 ಲಕ್ಷ ಉದ್ಯೋಗ, ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಘೋಷಿಸಿದೆ. ಇನ್ನೂ ವಿಶೇಷ ಅಂದ್ರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅಹಮದಾಬಾದ್ನಲ್ಲಿರುವ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರಿಡುವ ವಾಗ್ದಾನ ಮಾಡಿದೆ.
ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ಚುನಾವಣಾ ಪ್ರಣಾಳಿಕೆಯನ್ನು ಅಧಿಕೃತ ದಾಖಲೆಯಾಗಿ ಕಾಂಗ್ರೆಸ್ ಸ್ವೀಕರಿಸಲಿದೆ ಎಂದು ಹೇಳಿದರು.
ಅತಿರೇಕದ ಭ್ರಷ್ಟಾಚಾರಕ್ಕೆ ಗುಜರಾತ್‌ನ ಬಿಜೆಪಿ ನೇತೃತ್ವದ ಸರ್ಕಾರವನ್ನು ಹೊಣೆ ಮಾಡಿದ ಗೆಹ್ಲೋಟ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕಳೆದ 27 ವರ್ಷಗಳ ಭ್ರಷ್ಟಾಚಾರದ ಎಲ್ಲ ದೂರುಗಳ ಬಗ್ಗೆ ತನಿಖೆಗೆ ಆದೇಶಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.