ನವದೆಹಲಿ: ಜೂನ್ 10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಷಯವಾಗಿ ಕಾಂಗ್ರೆಸ್ನಲ್ಲಿ ಅಸಮಾಧಾನದ ಹೊಗೆ ಹೆಚ್ಚಾಗಿದೆ. ರಾಜಸ್ಥಾನ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಹೊರಗಿನವರಿಗೆ ಮಣೆ ಹಾಕಿರುವುದು ಸ್ಥಳೀಯ ಮುಖಂಡರಲ್ಲಿ ಅತೃಪ್ತಿಗೆ ಕಾರಣವಾಗಿದೆ. ಇದರ ನಡುವೆ ಶಾಸಕರ ಕುದುರೆ ವ್ಯಾಪಾರದ ಭೀತಿಯನ್ನೂ ಕಾಂಗ್ರೆಸ್ ಎದುರಿಸುತ್ತಿದೆ. ಹೀಗಾಗಿ ಉಭಯ ಸಂಕಟಗಳನ್ನು ಕಾಂಗ್ರೆಸ್ ಒಟ್ಟಿಗೆ ಪರಿಹರಿಸಿಕೊಳ್ಳಬೇಕಾದ ಅನಿರ್ವಾಯತೆಯಲ್ಲಿ ಸಿಲುಕಿದೆ.
ರಾಜಸ್ಥಾನದ ಮೂರು ರಾಜ್ಯಸಭಾ ಸ್ಥಾನಗಳಿಗೆ ರಂದೀಪ್ ಸಿಂಗ್ ಸುರ್ಜೇವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಮೂವರು ಕೂಡ ರಾಜಸ್ಥಾನಕ್ಕೆ ಹೊರಗಿನವರು. ಇತ್ತ, ಮಹಾರಾಷ್ಟ್ರ ಮತ್ತು ಹರಿಯಾಣದ ತಲಾ ಒಂದು ಸ್ಥಾನಕ್ಕೆ ಕ್ರಮವಾಗಿ ಇಮ್ರಾನ್ ಪ್ರತಾಪ್‌ಘರ್ಹಿ ಹಾಗೂ ಅಜಯ್ ಮಕೇನ್ ಅವರಿಗೆ ಮಣೆ ಹಾಕಲಾಗಿದೆ. ಈ ಇಬ್ಬರು ಸಹ ಎರಡು ರಾಜ್ಯಗಳಿಗೆ ಹೊರಗಿನವರೇ ಆಗಿದ್ದಾರೆ.
ಅಚ್ಚರಿ ಎಂದರೆ ರಂದೀಪ್ ಸಿಂಗ್ ಸುರ್ಜೇವಾಲಾ ಹರಿಯಾಣದವರೇ ಆಗಿದ್ದರೂ, ಅವರನ್ನು ಪಕ್ಕದ ರಾಜಸ್ಥಾನದಿಂದ ಕಣಕ್ಕಿಳಿಸಲಾಗಿದೆ. ಒಂದೇ ವೇಳೆ ಸುರ್ಜೇವಾಲಾ ಹರಿಯಾಣದಿಂದಲೇ ಸ್ಪರ್ಧಿಸಿದರೆ, ಈ ರಾಜ್ಯದಲ್ಲಿ ಅತೃಪ್ತಿಯೇ ಉಂಟಾಗುತ್ತಿರಲಿಲ್ಲವೇನೋ. ಆದರೆ, ಅಜಯ್ ಮಕೇನ್ಗೆ ಟಿಕೆಟ್ ನೀಡಿರುವುದು ಹರಿಯಾಣದ ಕಾಂಗ್ರೆಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ, ಕೆಲ ಶಾಸಕರೂ ಪಕ್ಷದ ಸಭೆಗಳಿಂದಲೇ ದೂರು ಉಳಿಯುವ ಮೂಲಕ ತಮ್ಮ ಸಿಟ್ಟು ಹೊರ ಹಾಕಿದ್ದಾರೆ.
ರೆಸಾರ್ಟ್ಗಳ ಮೊರೆ ಹೋದ 'ಕೈ': ಟಿಕೆಟ್ ವಿಚಾರವಾಗಿ ಪಕ್ಷದಲ್ಲಿನ ಅಸಮಾಧಾನದ ನಡುವೆ ತನ್ನ ಶಾಸಕರ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ರೆಸಾರ್ಟ್ ರಾಜಕಾರಣದ ಮೊರೆ ಹೋಗಿದೆ. ಗುರುವಾರ ಹರಿಯಾಣದ ಶಾಸಕರನ್ನು ಛತ್ತೀಸ್ಗಢದ ಮೈಫೈರ್ ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ. ಇತ್ತ, ರಾಜಸ್ಥಾನದಲ್ಲೂ ಶಾಸಕರನ್ನು ಜೈಪುರನಿಂದ ಉದಯಪುರ್ಗೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ : ಮುಂದುವರಿದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಗೊಂದಲ