ಹೈದರಾಬಾದ್: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಸಾವಾಗಿರುವ ಬಗ್ಗೆ ನಿರ್ದಿಷ್ಟವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿ ನೀಡಿಲ್ಲ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ರಾಜ್ಯಸಭೆಗೆ ತಿಳಿಸಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದ್ದು, ಭಾರತಿ ವಿರುದ್ಧ ಹಕ್ಕುಚ್ಯುತಿ ಸೂಚನೆ ಮಂಡಿಸಲು ನಿರ್ಧರಿಸಿದೆ.
ಕೊರೊನಾ ಎರಡನೇ ಅಲೆಯಲ್ಲಿ ಆಮ್ಲಜನಕದ ತೀವ್ರ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಕೊರೊನಾ ರೋಗಿಗಳು ರಸ್ತೆ ಮತ್ತು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆಯೇ? ಎಂಬ ಕಾಂಗ್ರೆಸ್ ಸಂಸದ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಭಾರತಿ ಉತ್ತರಿಸಿದ್ದರು. "ಕೋವಿಡ್ ಸಾವುಗಳನ್ನು ವರದಿ ಮಾಡಲು ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಅದರಂತೆ, ಎಲ್ಲಾ ನಿಯಮಿತವಾಗಿ ವರದಿ ಮಾಡುತ್ತಿವೆ. ಆದರೂ, ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಸಾವುಗಳು ಸಂಭವಿಸಿರುವ ಬಗ್ಗೆ ನಿರ್ದಿಷ್ಟವಾಗಿ ವರದಿ ಬಂದಿಲ್ಲ’ ಎಂದು ತಿಳಿಸಿದ್ದಾರೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್, " ಡಾ.ಭಾರತಿಯವರ ಲಿಖಿತ ಉತ್ತರ ದಾರಿ ತಪ್ಪಿಸುವಂತಿದೆ. ಇದು ಖಂಡನೀಯ. ಪ್ರತಿ ರಾಜ್ಯದಲ್ಲಿ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಅನೇಕ ಜನರು ಸಾಯುವುದನ್ನು ಕಂಡಿದ್ದೇವೆ. ಹೇಳಿಕೆ ಖಂಡನೀಯವಾಗಿದ್ದು, ಭಾರತಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿರ್ಧರಿಸಿದ್ದೇವೆ" ಎಂದು ಹೇಳಿದೆ.
ಸಚಿವರು ಅಥವಾ ಯಾವುದೇ ಸದಸ್ಯರು ಸತ್ಯವನ್ನು ತಡೆಹಿಡಿಯುವ ಮೂಲಕ ಅಥವಾ ಸುಳ್ಳು ಮಾಹಿತಿ ನೀಡುವ ಮೂಲಕ ಸದನದ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ನಿಲುವಳಿ ಸೂಚನೆ ಮಂಡಿಸಲಾಗುತ್ತದೆ. ತನ್ನ ತಪ್ಪನ್ನು ಒಪ್ಪಿಕೊಂಡರೆ ಸಂಸದೀಯ ಕಾನೂನಿನಡಿಯಲ್ಲಿ ಶಿಕ್ಷೆಗೆ ಸದಸ್ಯನು ಜವಾಬ್ದಾರನಾಗಿರುತ್ತಾನೆ" ಎಂದು ತಿಳಿಸಿದೆ.